Monday 29 June 2015

ಅನಿವಾಸಿ ಕನ್ನಡಿಗರ ಕಣ್ಮಣಿ “ ವಿಶ್ವ ಕನ್ನಡಿಗ ನ್ಯೂಸ್”


ಅಸ್ಸಲಾಮು ಅಲೈಕುಂ,
        ಕನ್ನಡಿಗರ ಅಚ್ಚುಮೆಚ್ಚಿನ ಅಂತರ್ಜಾಲ ಪತ್ರಿಕೆಯಾದ "ವಿಶ್ವ ಕನ್ನಡಿಗ ನ್ಯೂಸ್" ಇದೀಗ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಅಲ್ ಹಮ್ದುಲಿಲ್ಲಾಹ್. ಗಲ್ಫ್ ರಾಜ್ಯಗಳಲ್ಲಿ ದುಡಿಯುವವರ ಕಾರ್ಯನಿಬಿಡತೆ ಎಲ್ಲಾ ಅನಿವಾಸಿಗಳಿಗೂ ತಿಳಿದಿರುವ ವಿಚಾರ. ಆದರೂ ತನ್ನ ದೇಶ,ರಾಜ್ಯ,ಹಾಗೂ ಸುತ್ತುಮುತ್ತಲಿನ ಪರಿಸರದ ಮೇಲೆ ಪ್ರೇಮವನ್ನಿಟ್ಟು ಅದರಲ್ಲೂ ರಾಜ್ಯಭಾಷೆಯಾದ ಕನ್ನಡದ ಉಳಿವಿಗಾಗಿ ನಿರಂತರ ಪ್ರಯತ್ರಿಸುತ್ತಿರುವುದು ತುಂಬಾ ಸಂತೋಷದ ವಿಚಾರ.
ಪ್ರಧಾನ ಸಂಪಾದಕರಾದ ಸಿ.ಎಚ್.ಅಬ್ದುಲ್ ಹಮೀದ್ ರವರನ್ನು ಎಷ್ಟು ಹೊಗಳಿದರೂ ಸಾಲದು. ಇವರು ರಫೀಕ್ ಕೋಲ್ಪೆ, ಇರ್ಶಾದ್ ಬೈರಿಕಟ್ಟೆ, ಅನ್ಸಾರ್ ಬೆಳ್ಳಾರೆ, ನಿತೀನ್ ರೈ ಕುಕ್ಕುವಳ್ಳಿ ಹಾಗೂ ನುರಿತ ಕನ್ನಡ ಪ್ರೇಮಿಗಳ ತಂಡವನ್ನು ತನ್ನ ಜೊತೆಗೆ ಇಟ್ಟುಕೊಂಡು ನಿರಂತರವಾಗಿ ದೇಶ, ವಿದೇಶಗಳ ತಾಜಾ ಸುದ್ದಿಗಳನ್ನು ಆಯಾಯ ಸಮಯದಲ್ಲೇ ತಲುಪಿಸುವಲ್ಲಿ ವಿಶೇಷ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದೇ ಹೆಸರು, ಖ್ಯಾತಿ, ಪ್ರಶಸ್ತಿಗಳ ಬೆನ್ನತ್ತಿ ಈ ಬಳಗ ಹೋಗದಿರುವುದು ತುಂಬಾ ಉತ್ತಮ ವಿಚಾರ.
 ಅದೆಷ್ಟೋ ಬರಹ ಪ್ರೇಮಿಗಳಿಗೆ ಈ ಅಂತರ್ಜಾಲ ಪತ್ರಿಕೆಯು ಉತ್ತಮ ವೇದಿಕೆಯಾಗಿದೆ. ಯುವ ಬರಹಗಾರರ ಹೊಸ ಹೊಸ ಬರಹಗಳನ್ನು ನಿರ್ಲಕ್ಷಿಸಲಿಲ್ಲ. ಬದಲಾಗಿ ಅದನ್ನು ತಿದ್ದಿ ತೀಡಿ ಪ್ರಕಟಣಾ ಯೋಗ್ಯವನ್ನಾಗಿ ಮಾಡಿದ ಹೆಮ್ಮೆ ಇದಕ್ಕೆ ಸಲ್ಲಬೇಕು. ಇದರಿಂದ ಹೊಸ ಬರಹಗಾರರು ಇನ್ನಷ್ಟು ಬರಹ ಪ್ರೇಮಿಗಳಾಗಲು ಸಹಕಾರಿಯಾಯಿತು. ಈ ಮೂಲಕ ಅದೆಷ್ಟೋ ಬರಹಗಾರರನ್ನು ಸೃಷ್ಟಿಸಿದ ಖ್ಯಾತಿ ಈ ಪತ್ರಿಕೆಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಐದು ಸಂವತ್ಸರಗಳು ತುಂಬುತ್ತಿರುವ ಈ ಸಂಧರ್ಭದಲ್ಲಿ ಎಲ್ಲಾ ಪತ್ರಿಕೆಯ ಬಳಗದವರಿಗೂ ನನ್ನ ಹೃದಾಯಾಂತರಾಳದ ಅಭಿನಂದನೆಗಳು. ಅಲ್ಲಾಹು ತಮ್ಮ ಈ ಸೇವೆಯನ್ನು ಸ್ವೀಕರಿಸಲಿ. ಇನ್ನು ಮುಂದಕ್ಕೂ ಇನ್ನಷ್ಟು ಎತ್ತರಕ್ಕೆ ಬೆಳೆಯುವ ತೌಫೀಕ್ ನೀಡಲಿ. ಎಲ್ಲಾ ಸೇವೆಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ಮೀಸಲಿಡುವ ಗುಣವನ್ನು ಬೆಳೆಸಿಕೊಳ್ಳುವ ಹೃದಯವನ್ನು ನೀಡಲಿ (ಆಮೀನ್ ಯಾ ರಬ್ಬಲ್ ಆಲಮೀನ್)

ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

ಮಾನವ ವಿಮೋಚಕ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ಮತ್ತು ರಮಝಾನ್




ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರವರು ಬಂದಂತಹ ಸಮುದಾಯವು ಗತ ಪ್ರವಾದಿಗಳ ಶಿಕ್ಷಣಗಳನ್ನು ಸಂಪೂರ್ಣವಾಗಿ ವಿರೂಪಗೊಳಿಸಿದಂತಹ ಸಮುದಾಯವಾಗಿತ್ತು. ಇಲ್ಲಿ ಮಾನವತೆಯು ಮರೀಚಿಕೆಯಾಗಿತ್ತು. ಅಲ್ಲಾಹನ ತೌಹೀದ್(ಏಕದೇವತ್ವ) ನ್ನು ವಿಕಾರಗೊಳಿಸಲಾಗಿತ್ತು. ಜಾಗತಿಕ ಮುಸ್ಲಿಮರ ಕೇಂದ್ರ ಬಿಂದುವಾಗಿದ್ದ ಪವಿತ್ರ ಕಅಬಾ ಭವನವದ ನಗ್ನವಾಗಿ ತವಾಫ್(ಪ್ರದಕ್ಷಿಣೆ) ಮಾಡಲಾಗುತ್ತಿತ್ತು. ಇಲ್ಲಿ ಮೂರ್ತಿಗಳನ್ನು ಪ್ರತಿಷ್ಥಾಪಿಸಿ ಅದಕ್ಕೆ ಸಾಷ್ಥಾಂಗವೆರಗುತ್ತಾ, ಅವುಗಳ ಮುಖಾಂತರ ಸಹಾಯ ಯಾಚಿಸುವುದನ್ನೇ ನೈಜ ದಾಸ್ಯಾರಾಧನೆ ಎಂದು ಭಾವಿಸಲಾಗಿತ್ತು. ಮನುಷ್ಯ ಮನುಷ್ಯರ ನಡುವಿನ ಸಂಭಂಧಗಳು ಹಳಸಿ ಹೋಗಿ, ಸಣ್ಣ ಪುಟ್ಟ ವಿಷಯಗಳನ್ನು ವಿಷಯಾಂತರವನ್ನಾಗಿ ಮಾಡಿ ತಲೆ ತಲಾಂತರದವರೆಗೆ ಜಗಳಗಳನ್ನು ಹುಟ್ಟು ಹಾಕಲಾಗುತ್ತಿತ್ತು. ಮಾನವ ಸಂಭಂಧಗಳು ಕೆಟ್ಟು ನುಚ್ಚು ನೂರಾಗಿದ್ದವು. ಕುಟುಂಬದ ಕಣ್ಣಾದ ಹೆಣ್ಣು ಅಗೌರವದ ಸಂಕೇತವಾಗಿತ್ತು. ಇದಕ್ಕೆ ಪ್ರತಿಯಾಗಿ ಅವರು ಹೆಣ್ಣು ಹುಟ್ಟಿದಾಕ್ಷಣ ಜೀವಂತ ಸಮಾಧಿ ಮಾಡಲು ಹಿಂಜರಿಯುತ್ತಿರಲಿಲ್ಲ. ಒಟ್ಟಲ್ಲಿ ಮಾನವ ಸಂಭಂಧಗಳು ಹಳಸಿ ಹೋಗಿ ಅನಾಗರಿಕತೆಯು ತಾಂಡವಾಡುತ್ತಿತ್ತು. ಸಂಪೂರ್ಣ ಅಲ್ಲೋಲ ಕಲ್ಲೋಲವಾದಂತಹ ಕಾರ್ಗತ್ತಲು ಆವರಿಸಿದಂತಹ ಸಮುದಾಯದಲ್ಲಿ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ಹುಟ್ಟಿ ಬಂದರು.
            ಇಂತಹ ಘನಘೋರ ಕತ್ತಲೆಯಲ್ಲಿ ಮನುಷ್ಯರನ್ನು ನೈಜತೆಯೆಡೆಗೆ ತರುವುದೆಂದರೆ ಅದು ಕಬ್ಬಿಣದ ಕಡಲೆಯೇ ಸರಿ. ಅಲ್ಲಾಹನು ಇಡೀ ಜಗತ್ತಿನಲ್ಲಿ ಆವರಿಸಿದಂತಹ ಕತ್ತಲೆಯನ್ನು ನಿವಾರಿಸಲಿಕ್ಕಾಗಿ ಸತ್ಯಸಂಧ, ನಿಷ್ಕಲ್ಮಷ ಹೃದಯವುಳ್ಳ, ಮಾನವ ವಿಮೋಚಕ, ಕರುಣಾಮಯಿಯಾದ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರನ್ನು ತನ್ನ ದಿವ್ಯ ವಚನಗಳನ್ನು ನೀಡಿ ಕಳುಹಿಸಿದ. ಹೃದಯಗಳನ್ನು ಬೆಳಗಿಸುವಂತಹ ಈ ವಚನಗಳ ಮೂಲಕ ಪ್ರವಾದಿ (ಸ್ವ.ಸ್ವ) ರವರು ಕಲ್ಲುಮಳ್ಳುಗಳ ಹಾದಿಗಳನ್ನು ಸವೆಸಿ ಅನಾಗಕರಿಕರನ್ನು ನಾಗರಿಕತೆಯೆಡೆಗೆ ತರುವಲ್ಲಿ ಸಂಪೂರ್ಣ ಯಶಸ್ವಿಯಾದರು. ಸತ್ಯ ಅಸತ್ಯಗಳ ನಡುವಿನ ವ್ಯತ್ಯಾಸವನ್ನೂ ಮಾನವತೆಯ ಗೌರವ ಘನತೆಗಳನ್ನೂ ತೋರಿಸಿ ಕೊಟ್ಟರು. ಅಲ್ಲಾಹನ ಹಾಗೂ ಅವನ ದಾಸರ ನಡುವಿನ ಸಂಭಂಧಗಳನ್ನು ಪರಿಚಯಿಸಿ ಅವರ ಹೃದಯಗಳಲ್ಲಿ ದೇವ ಭಯ ಉಂಟಾಗುವ ವಾತಾವರಣವನ್ನು ನಿರ್ಮಿಸಿದರು. ನಿರಂತರವಾದ ತರಬೇತಿಗಳ ಮೂಲಕ ವರ್ಣ ಭೇಧ, ಜಾತಿ ಭೇಧ, ಕುಟುಂಬ ಕಲಹಗಳಂತಹ ಮಾನವ ವಿರೋಧಿ ನೀತಿಗಳಿಂದ ಹೊರತರಲು ಶ್ರಮಿಸಿದರು.
            ಪವಿತ್ರ ರಮಝಾನ್ ಕುರ್ ಆನ್ ಅವತೀರ್ಣವಾದ ತಿಂಗಳಾಗಿದೆ. ಮನುಷ್ಯರಿಗೆ ಸುವ್ಯಕ್ತವಾದ ಶಿಕ್ಷಣವನ್ನು ನೀಡಿ ಸತ್ಯ ಪಥದತ್ತ ಕೊಂಡೊಯ್ಯಲು ದಾರಿ ತೋರಿಸುವ ಗ್ರಂಥ ಅದಾಗಿದೆ. ಆದ್ದರಿಂದ ಯಾರಾದರೂ ಈ ತಿಂಗಳನ್ನು ಹೊಂದಿದಲ್ಲಿ ಈ ತಿಂಗಳ ಸಂಪೂರ್ಣ ಉಪವಾಸವನ್ನು ಆಚರಿಸಬೇಕು ಎಂಬ ಆಜ್ಞೆಯನ್ನು ಅಲ್ಲಾಹನು ನೀಡುತ್ತಾನೆ. (ಕುರ್ ಆನ್ 2; 185).
            “ಇರುಳಿನ ಕರಿ ರೇಖೆಯಿಂದ ಉಷಾ ಕಾಲದ ಬಿಳಿರೇಖೆಯು ನಿಮಗೆ ಬೇರ್ಪಟ್ಟು ತೋರುವ ವರೆಗಿನ ನಿಶಾವಧಿಯಲ್ಲಿ ತಿನ್ನಿರಿ, ಕುಡಿಯಿರಿ. ಅನಂತರ ಈ ಕಾರ್ಯಗಳನ್ನೆಲ್ಲಾ (ದೈಹಿಕ ಕಾಮನೆಗಳ ಹೊರತು) ರಾತ್ರಿಯ ವರೆಗೆ ನಿಮ್ಮ ಉಪವಾಸವನ್ನು ಪೂರ್ತಿಗೊಳಿಸಿರಿ. (ಕುರ್ ಆನ್ 2:187)
ಪ್ರವಾದಿ ಮುಹಮ್ಮದ್(ಸ್ವ.ಸ್ವ) ರವರ ನಿರಂತರವಾದ ತರಬೇತಿಗಳಿಂದ ಎಚ್ಚೆತ್ತು ಸತ್ಯವಿಶ್ವಾಸಿಗಳಾದ ಅರಬರು ಅಲ್ಲಾಹನ ಆದೇಶಕ್ಕೆ ತಲೆಬಾಗಿದರು. ಒಂದು ತಿಂಗಳ ಸಂಪೂರ್ಣ ಉಪವಾಸವು ಹಾಗೂ ದೈಹಿಕ ಬಯಕೆಗಳ ನಿಂತ್ರಣವು ಅವರಲ್ಲಿ ದೇವ ಭಯವನ್ನು ಉಂಟು ಮಾಡುವಲ್ಲಿ ಸಹಕಾರಿಯಾಯಿತು. ನೆರೆಮನೆಯ ಒಂದು ಪ್ರಾಣಿಯು ನೀರು ಕುಡಿದ ಕಾರಣಕ್ಕಾಗಿ ತಲೆಮಾರುಗಳ ವರೆಗೆ ಜಗಳ ಮಾಡುವವರು ತನ್ನ ಸಂಪತ್ತಿನ ಒಂದು ಪಾಲನ್ನು ನೆರೆಯವನಿಗೆ ನೀಡುವಷ್ಟು ಉದಾರಿಗಳಾದರು. ದ್ವೇಷ, ವೈರತ್ವದ ಬದಲು ಸಹನಾಶೀಲರಾಗಿ ಬಾಳುವಷ್ಟು ಎತ್ತರಕ್ಕೇರಿದರು. ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರವರು ಹಾಕಿ ಕೊಟ್ಟ ಸನ್ಮಾರ್ಗವು ಅಂದೂ ಪ್ರಸ್ತುತ ಇಂದೂ ಪ್ರಸ್ತುತ. ಈ ಲೋಕದ ಅಂತ್ಯದವರೆಗೂ ಪ್ರಸ್ತುತವೇ ಆಗಿದೆ.
ಪವಿತ್ರ ರಮಝಾನ್ ಮಾಸದ ಮೊದಲ ಹತ್ತು ದಿವಸ ನಮ್ಮನ್ನಗಲಿದೆ. ಇವು ಅಲ್ಲಾಹನ ರಹ್ ಮತ್ ನ ದಿನಗಳಾಗಿದ್ದವು. ಇಂದಿನಿಂದ ಎರಡನೇ ಹತ್ತು ಪ್ರಾರಂಭ. ಇವು ಮಗ್ ಫಿರತ್ ಗಳಿಂದ ಕೂಡಿದ ಪುಣ್ಯ ದಿವಸಗಳಾಗಿವೆ. ಅಲ್ಲಾಹು ನಮ್ಮೆಲ್ಲರ ಮೊದಲ ಹತ್ತು ಉಪವಾಸಗಳನ್ನು ಸ್ವೀಕರಿಸಿ ಮಧ್ಯದ ಹತ್ತು ದಿನಗಳಲ್ಲಿ ಚಾಚೂ ತಪ್ಪದೇ ಅವನ ಆಜ್ಞಾನುಸಾರ ಇಬಾದತ್ ಮಾಡುವ ತೌಫೀಕ್ ನಮಗೆ ನೀಡಲಿ. ಹಾಗೂ ಅವನ ನೈಜ ದಾಸರಾಗುವ ತೌಫೀಕ್ ನಮಗೆ ಲಭಿಸಲಿ (ಆಮೀನ್).


ಲೇಖನ : ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

ಕೆಡುಕು ಮುಕ್ತ ಸಮಾಜ ಮತ್ತು ರಮಝಾನ್




ಸುಳ್ಳಾಡುವುದು ಮನುಷ್ಯನ ಬಹು ದೊಡ್ಡ ದೌರ್ಬಲ್ಯವಾಗಿದೆ. ಇದರ ದುಷ್ಪರಿಣಾಮ ಸುಳ್ಳು ಹೇಳುವವನಿಗೆ ಮಾತ್ರವಲ್ಲ, ಸಮಾಜದ ಮೇಲೂ ಬೀಳುತ್ತದೆ. ಇದು ಕೆಡುಕುಗಳಲ್ಲಿ ಅತ್ಯಂತ ಪ್ರಭಾವಶಾಲಿ ಕೆಡುಕು. ಒಬ್ಬ ವ್ಯಕ್ತಿಯು ಸುಳ್ಳನ್ನು ತ್ಯಜಿಸಿದಲ್ಲಿ ಎಲ್ಲಾ ಕೆಡುಕುಗಳಿಂದ ಮುಕ್ತರಾಗಲು ಸಾಧ್ಯವಿದೆ ಎಂಬುದು ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಅ) ರವರ ಶಿಕ್ಷಣವಾಗಿದೆ.
          ರಂಝಾನ್ ತಿಂಗಳ ಉಪವಾಸವಿದ್ದವನು ಸುಳ್ಳಾಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಪ್ರವಾದಿಯವರು ವಿಶೇಷವಾಗಿ ಒತ್ತು ಕೊಟ್ಟು ಹೇಳಿದ್ದಾರೆ. “ ಒಬ್ಬನು ಸುಳ್ಳಾಡುವುದನ್ನು , ಸುಳ್ಳು ವ್ಯವಹಾರ ಮಾಡುವುದನ್ನು ಬಿಡದಿದ್ದರೆ ಅವನು ಆಹಾರ ಪಾನೀಯಗಳನ್ನು ಬಿಡಬೇಕೆಂಬ ಅಪೇಕ್ಷೆ ಅಲ್ಲಾಹನಿಗೆ ಇಲ್ಲವೇ ಇಲ್ಲ” (ಹದೀಸ್).
          ಮನುಷ್ಯನ ಇನ್ನೊಂದು ದೌರ್ಬಲ್ಯ ಅಸಹನೆ. ಪರಸ್ಪರ ಹಗೆತನ, ಅಸಹಕಾರ, ಮತ್ಸರ, ಕ್ರೋಧ, ಪ್ರತೀಕಾರ ಮನೋಭಾವ, ಸಂಘರ್ಷ ಮುಂತಾದ ಹಲವು ಕೆಡುಕುಗಳಿಗೆ ಅಸಹನೆಯು ಪ್ರೇರಣೆಯಾಗಿದೆ. ಒಂದು ತಿಂಗಳ ಉಪವಾಸವು ಸತ್ಯವಿಶ್ವಾಸಿಯನ್ನು ಈ ಕೆಡುಕುಗಳಿಂದ ತನ್ನನ್ನು ದೂರೀಕರಿಸಲು ಬಲು ಸಹಕಾರಿ. ಆದ್ದರಿಂದಲೇ ಪ್ರವಾದಿ ಮುಹಮ್ಮದ್ (ಸ್ವ.ಅ) ರವರು ಹೇಳಿರುವುದು. “ ಉಪವಾಸವಿರುವವನು ಜಗಳ, ಗಲಾಟೆಗಳಿಂದ ದೂರವಿರಬೇಕು. ಆತನನ್ನು ಯಾರಾದರೂ ಬೈದರೆ ಅಥವಾ ಅವನೊಡನೆ ಜಗಳಕ್ಕೆ ಬಂದರೆ, ಸಹೊದರಾ, ನಾನು ಉಪವಾಸವಿದ್ದೇನೆ ಎಂದು ಹೇಳಿ ತಪ್ಪಿಸಿಕೊಳ್ಳಬೇಕು.(ಹದೀಸ್)
ಇಂದು ಜಗತ್ತಿನಾದ್ಯಂತ ನಡೆಯುವ ನಾನಾ ತರಹದ ಸಂಘರ್ಷಗಳಿಗೆ ಮೂಲ ಕಾರಣ ಅಸಹನೆ. ಇದಕ್ಕಾಗಿಯೇ ಪ್ರವಾದಿಯವರು ಒಬ್ಬ ಸತ್ಯವಿಶ್ವಾಸಿಯ ಉಪವಾಸವು ಬರೇ ಅನ್ನ ಪಾನೀಯಗಳನ್ನು ತೊರೆಯುವುದಕ್ಕಾಗಿಯೇ ಸೀಮಿತವಾಗಿರಬಾರದು ಬದಲಾಗಿ ಅವನಲ್ಲಿ ಸಹಾನಾಶೀಲತೆಯು ಜಾಗೃತಗೊಳ್ಳಬೇಕು ಎಂದು ಹೇಳಿರುವುದು.
ಪ್ರವಾದಿ (ಸ್ವ.ಅ) ರವರು ತೋರಿಸಿ ಕೊಟ್ಟ ತರಬೇತಿಗಳ ಮೂಲಕ ನಿರಂತರ ಒಂದು ತಿಂಗಳ ಉಪವಾಸವನ್ನು ಆಚರಿಸಿದ್ದಲ್ಲಿ ಅದೊಂದು ಅಭ್ಯಾಸವಾಗಿ ಮಾರ್ಪಡುತ್ತದೆ ಎಂಬುದು ಧೃಢ ಸತ್ಯ. ಅಲ್ಲಾಹನ ಆದೇಶಗಳ ಪಾಲನೆ, ದೈಹಿಕವಾದ ಎಲ್ಲಾ ಕೆಡುಕುಗಳಿಂದ ತನ್ನನ್ನು ಮುಕ್ತಗೊಳಿಸಿ, ಅವನ ದಾಸರೊಂದಿಗೆ ಉತ್ತಮ ಭಾಂಧವ್ಯವು ಬೆಳೆಸಬೇಕು. ಇದರ ಮೂಲಕ ಅದೆಂತಹ ಪರಿಣಾಮಕಾರಿ ಸಮಾಜವನ್ನು ನಾವು ನೋಡಲು ಸಾಧ್ಯ ಎಂದು ಚಿಂತಿಸಲಿಕ್ಕೆ ನಮ್ಮ ಮುಂದಿರುವ ರಮಝಾನ್ ತಿಂಗಳು ಸಕಾಲ.
ವಿಶ್ವದಲ್ಲಿ ನಡೆಯುತ್ತಿರುವ ಅನಾಗರಿಕ ಕೋಮು ಗಲಭೆಗಳು ಇಲ್ಲದಾಗಬಹುದು. ಹೆಣ್ಣಿನ ಮೇಲಿನ ದೌರ್ಜನ್ಯಗಳು ಅಳಿಸಿ ಹೋಗಬಹುದು. ಅತ್ಯಾಚಾರದಂತಹ ಕೆಡುಕುಗಳಿಂದ ಸಮಾಜವು ಮುಕ್ತವಾಗಬಹುದು. ಪ್ರಬಲರ ಹಾಗೂ ದುರ್ಬಲರ ನಡುವಿನ ಸಂಘರ್ಷಗಳು ನಡೆಯಲಾರದು. ಕುಟುಂಬ ಕಲಹಗಳು ಒಳಜಗಳಗಳು ಇಲ್ಲದಾಗಬಹುದು. ವರದಕ್ಷಿಣೆಯಂತಹ ಮಹಾಮಾರಿಗೆ ಅಂತ್ಯ ಹಾಡಬಹುದು. ಛಿದ್ರವಾದಂತಹ ಕುಟುಂಬಗಳನ್ನು ಒಗ್ಗೂಡಿಸಬಹುದು. ಹೆಣ್ಣು ಹುಟ್ಟಿದಲ್ಲಿ ಅದನ್ನು ಕುಟುಂಬದ ಕಣ್ಣಾಗಿ ಕಾಣುವ ವಾತಾವರಣವನ್ನು ನಿರ್ಮಿಸಬಹುದು. ಹುಟ್ಟುವ ಮಗು ಹೆಣ್ಣು ಎಂದಾಕ್ಷಣ ಅದನ್ನು ಕೊಲ್ಲುವಂತಹ ಅನಾಗರಿಕ ಪದ್ಧತಿಯು ನಿಲ್ಲಬಹುದು. ಸಂಕಷ್ಟಗಳಿಗೆ ಸಹಾಯ ಮಾಡುವಂತಹ ಉದಾತ್ತ ಗುಣವನ್ನು ಹೊಂದಬಹುದು. ದಾನ ದರ್ಮಗಳ ಮೂಲಕ ಕಿತ್ತು ತಿನ್ನುವ ಬಡತನವನ್ನು ಸಮಾಜದಿಂದ ಕೊನೆಗೊಳಿಸಬಹುದು. ಹೆಣ್ಣು ಯಾವುದೇ ಭಯವಿಲ್ಲದೇ ಸಂಚರಿಸುವಂತಹ ಉತ್ತಮ ಸಮಾಜ ನಿರ್ಮಾಣವಾಗಬಹುದು. ಇಷ್ಟೇ ಅಲ್ಲ, ಅದೆಷ್ಟೋ ಕೆಡುಕುಗಳನ್ನು ನಿರ್ಮೂಲನೆ ಮಾಡುವಂತಹ ಪ್ರೇರಣಾ ಶಕ್ತಿಯನ್ನು ಪವಿತ್ರ ರಮಝಾನ್ ತಿಂಗಳು ಹೊಂದಿದೆ. ಇಂತಹ ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡಿ ಪ್ರತಿಯೊಬ್ಬರಲ್ಲಿಯೂ ತಕ್ವಾ (ದೇವಭಯ) ವನ್ನು ಜಾಗೃತಗೊಳಿಸುವ ರಮಝಾನ್ ಮಾಸವು ಇದೋ ನಮ್ಮ ಮುಂದಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ನಿರಂತರವಾದ ತರಬೇತಿಗಳ ಮೂಲಕ ಪ್ರತಿಯೊಬ್ಬರಲ್ಲಿಯೂ ಅಲ್ಲಾಹನ ಭಯ ಜಾಗೃತಗೊಳಿಸುವಂತಹ ಸಮಾಜವನ್ನು ನಿರ್ಮಾಣ ಮಾಡುವ ಪ್ರತಿಜ್ಞೆಗೈಯ್ಯೋಣ. ಅಲ್ಲಾಹು ಆ ತೌಫೀಕ್ ನಮಗೆಲ್ಲರಿಗೂ ನೀಡಲಿ (ಆಮೀನ್)
ಲೇಖನ : ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

ರಮಝಾನ್ ಮತ್ತು ಬದಲಾವಣೆ

“ವಾಸ್ತವದಲ್ಲಿ ಅಲ್ಲಾಹನು ಸತ್ಯ ವಿಶ್ವಾಸಿಗಳಿಂದ ಅವರ ತನು, ಧನಗಳನ್ನು ಸ್ವರ್ಗದ ಬದಲಿಗೆ ಖರೀದಿಸಿದ್ದಾನೆ” (ಪವಿತ್ರ ಕುರ್ ಆನ್ 9:11)
ಯಾವುದೇ ಚಿಂತೆಯಿಲ್ಲದ, ಸದಾ ತಾರುಣ್ಯದಲ್ಲಿರುವ, ಯಾವತ್ತಿಗೂ ಮರಣವಿಲ್ಲದ ಶಾಶ್ವತವಾದ ಹಾಗೂ ಆರೋಗ್ಯದಾಯಕ  ಜೀವನ ಮನುಷ್ಯನಿಗೆ ಲಭಿಸುವುದು ಅದು ಸ್ವರ್ಗದಲ್ಲಿ ಮಾತ್ರವಾಗಿದೆ. ಪ್ರತಿಯೊಬ್ಬ ಸತ್ಯ ವಿಶ್ವಾಸಿಯೂ ತನ್ನ ಜೀವನದಲ್ಲಿ ಸ್ವರ್ಗವನ್ನು ಅಪೇಕ್ಷಿಸುವುದು ಸರ್ವೇ ಸಾಮಾನ್ಯ. ಒಬ್ಬ ಸತ್ಯ ವಿಶ್ವಾಸಿಯ ಈ ಬಯಕೆಯನ್ನು ಅಲ್ಲಾಹನಲ್ಲದೇ ಬೇರೆ ಯಾರಿಂದಲೂ ಈಡೇರಿಸಲು ಸಾಧ್ಯವಿಲ್ಲ. ಈ ಬಯಕೆಯು ಈಡೇರಬೇಕಾದರೆ ಮನುಷ್ಯನು ತನ್ನ ಜೀವನದಾದ್ಯಂತ ಸೃಷ್ಥಿಕರ್ತನ ಆಜ್ಞಾನುಸಾರ ಜೀವನ ನಡೆಸಬೇಕು. ಇದಕ್ಕಾಗಿ ಸೃಷ್ಥಿಯ ಆರಂಭದಿಂದಲೇ ಮನುಷ್ಯ ಜೀವನದ ಉದ್ದೇಶ ಅಲ್ಲಾಹನ ಆಜ್ಞಾನುಸಾರ ಜೀವನ ಎಂಬ ಕರಾರನ್ನು ಪಡೆಯಲಾಗಿದೆ. (ಅಲ್ ಅಅ್ ರಾಫ್ 172)
       ಸ್ವೇಚ್ಛಾಚಾರ ಮನುಷ್ಯನ ಅತೀ ದೊಡ್ಡ ದೌರ್ಬಲ್ಯವಾಗಿದೆ. ಯಾವಾಗ ಮನುಷ್ಯನು ಸ್ವೇಚ್ಛಾಚಾರಿಯಾಗಿ ಜೀವನ ನಡೆಸಲು ಪ್ರಾರಂಭಿಸುತ್ತಾನೋ ಅವನು ನೇರ ದಾರಿಯಿಂದ ವಿಮುಖನಾಗುವುದು ಖಂಡಿತ. ಇಂತಹ ಸಂಧರ್ಭಗಳಲ್ಲೆಲ್ಲಾ ಅಲ್ಲಾಹನು ತನ್ನ ಪ್ರವಾದಿಗಳ ಮೂಲಕ ಮನುಷ್ಯನನ್ನು ಜಾಗೃತಗೊಳಿಸಿರುವುದು ಅವನ ಅಪಾರವಾದ ಕರುಣೆಯಾಗಿದೆ.
       ಮನುಷ್ಯನ ಜ್ಞಾನವನ್ನು ಬೆಳಗಿಸಲಿಕ್ಕಾಗಿ, ಅವನ ಜೀವನ ಸುಧಾರಣೆಗಾಗಿ ರಂಝಾನ್ ತಿಂಗಳ ಉಪವಾಸ ವೃತವು ವಿಶಿಷ್ಥ ಪಾತ್ರವನ್ನು ಹೊಂದಿದೆ.  ಬೆಳಗ್ಗಿನಿಂದ ಸಂಜೆಯವರೇಗೆ ಅನ್ನಾಹಾರವನ್ನು ತ್ಯಜಿಸಿ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ನಿಯಂತ್ರಣದಲ್ಲಿ ಇಟ್ಟಲ್ಲಿ ದೇವಭಯವು ಮನಸ್ಸಿನಲ್ಲಿ ಉಂಟಾಗುವುದು ಸ್ವಾಭಾವಿಕ. ಉಪವಾಸವಲ್ಲದೇ ಬೇರೆ ಎಲ್ಲಾ ಇಬಾದತ್ ಗಳಲ್ಲಿ ತೋರಿಕೆ ಇದೆ. ಆದರೆ ಇದರಲ್ಲಿ ಕಾಪಟ್ಯತೆಗೆ ಅವಕಾಶವೇ ಇಲ್ಲ. ಆದ್ದರಿಂದ ಉಪವಾಸವನ್ನು ಗತಕಾಲದಿಂದಲೇ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೆ ಅಲ್ಲಾಹನು ಕಡ್ಡಾಯಗೊಳಿಸಿದ್ದಾನೆ. “ಗತ ಪ್ರವಾದಿಗಳ ಅನುಯಾಯಿಗಳ ಮೇಲೆ ಉಪವಾಸ ಕಡ್ಡಾಯಗೊಳಿಸಿದಂತೆಯೇ ನಿಮ್ಮ ಮೇಲೂ ಉಪವಾಸ ವೃತವನ್ನು ಕಡ್ಡಾಯಗೊಳಿಸಲಾಗಿದೆ. ನಿಮ್ಮಲ್ಲಿ ಧರ್ಮನಿಷ್ಥೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.(ಕುರ್ ಆನ್ 2:183).

ಲೇಖನ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

Wednesday 2 July 2014

ಉಪವಾಸ ಹಾಗೂ ಸತ್ಯ ವಿಶ್ವಾಸಿಯ ಆಹಾರ ಶೈಲಿ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಮಿಕ್ ದಾದ್ ಬಿನ್ ಮಅದಿ ಕರಬ್ ರಿಂದ ವರದಿ: ಪ್ರವಾದಿವರ್ಯರು(ಸ) ಹೇಳುವುದನ್ನು ನಾನು ಕೇಳಿದ್ದೇನೆ: ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ಮಾನವನು ತುಂಬಿಸಿಲ್ಲ. ಮಾನವ ಪುತ್ರನಿಗೆ ಅವನ ಬೆನ್ನೆಲುಬನ್ನು ನೇರ ನಿಲ್ಲಿಸಲು ಕೆಲವು ತುತ್ತುಗಳೇ ಸಾಕು. ಅದಕ್ಕಿಂತ ಹೆಚ್ಚು ಬೇಕೇ ಬೇಕೆಂದಾದರೆ, ಹೊಟ್ಟೆಯ 3/1 ಭಾಗ ಆಹಾರಕ್ಕೆ, 3/1 ನೀರಿಗೆ ಮತ್ತು 3/1 ಉಸಿರಾಟಕ್ಕೆ ಮೀಸಲಿಡಲಿ (ತಿರ್ಮಿದಿ)
ಮಾನವ ಕುಲಕ್ಕೆ ಎಲ್ಲ ವಿಷಯಗಳಲ್ಲಿಯೂ ಮಾರ್ಗದರ್ಶನ ನೀಡುವ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯು ಇಲ್ಲಿ ಈ ಹದೀಸ್ ನಲ್ಲಿ ಆರೋಗ್ಯಪೂರ್ಣ ಆಹಾರ ಶೈಲಿಯನ್ನು ಕಲಿಸುತ್ತಿದೆ. ಒಮ್ಮೆ ಆಲೋಚಿಸಿ ನೋಡಿ, ಪ್ರವಾದಿವರ್ಯರ(ಸ್ವ.ಸ್ವ.) ಈ ಆಹಾರ ಶೈಲಿಯನ್ನೇ ಆಧುನಿಕ ವೈದ್ಯ ಶಾಸ್ತ್ರವೂ ಮಾನವನಿಗೆ ಕಲಿಸುತ್ತಿದೆ. ಹಸಿವೆಯ ರೋಗಗಳಿಗಿಂತ ಹೆಚ್ಚಾಗಿ ಅಮಿತ ಆಹಾರದ ದುರಂತಗಳನ್ನು ಅನುಭವಿಸುತ್ತಿರುವ ಆಧುನಿಕ ಮಾನವ ಸಮೂಹಕ್ಕೆ ಪ್ರವಾದಿವರ್ಯರ(ಸ್ವ.ಸ್ವ.) ಈ ಮಾರ್ಗದರ್ಶನವು ಬಹಳ ಉಪಯುಕ್ತವಾಗಿದೆ.
ಆಹಾರವು ಜೀವರಕ್ಷಣೆಯ ಅನಿವಾರ್ಯ ಘಟಕ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅದರ ಪಾತ್ರ ಪ್ರಧಾನ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯು ಒಂದು ಶಾಸ್ತ್ರೀಯ ಆಹಾರ ಶೈಲಿಯನ್ನು ಕಲಿಸುತ್ತಿದೆ. ಮಾನವನ ಜಠರವನ್ನು ಕೆಡಿಸಿ, ದೇಹದ ಪ್ರಮುಖ ಅಂಗಾಗಳನ್ನು ಹಾನಿಗೊಳಿಸುವ ಅಮಿತ ಭೋಜನದ ಬಗ್ಗೆ ಕುರ್ ಆನ್ ಹೀಗೆ ಹೇಳಿದೆ: `ನೀವು ತಿನ್ನಿರಿ, ಕುಡಿಯಿರಿ, ಆದರೆ ಮಿತಿಮೀರಬೇಡಿರಿ. ಮಿತಿ ಮೀರುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.’ ಆಹಾರದ ನಿಯಮ-ನಿಷೇಧಗಳನ್ನು ನೋಡದೆ ಸಿಕ್ಕಾಪಟ್ಟೆ ತಿಂದು ಹೊಟ್ಟೆ ತುಂಬಿಸುವವರು ಮತ್ತು ತಮ್ಮ ಸಂಪತ್ತನ್ನು ಸಂಪೂರ್ಣವಾಗಿ ಆಹಾರಕ್ಕಾಗಿ ವ್ಯಯಿಸುವ ವಿನಾ ಜೀವನಕ್ಕೆ ಬೇರೆ ಯಾವುದೇ ಗುರಿಯಿಲ್ಲದವರನ್ನು ಕುರ್ ಆನ್ ಇಲ್ಲಿ ಎಚ್ಚರಿಕೆ ನೀಡಿದೆ. ಈ ವಚನದ ವಿವರಣೆಯಲ್ಲಿ ಇಬ್ನು ಕಸೀರ್ ಹೀಗೆ ಹೇಳಿದ್ದಾರೆ: `ಅಲ್ಲಾಹನು ವೈದ್ಯಕೀಯವನ್ನು ಸಂಪೂರ್ಣವಾಗಿ ಒಂದು ವಚನದ ತುಣುಕಿನಲ್ಲಿ ಸೇರಿಸಿದ್ದಾನೆ. ಇದು ಪವಿತ್ರ ಕುರ್ ಆನ್ ನಲ್ಲಿ ವೈದ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಮುಖ ವಚನವೂ ಆಗಿದೆ.
ಪ್ರವಾದಿವರ್ಯರು(ಸ್ವ.ಸ್ವ.) ಅತಿಭೋಜನದ ಅಪಾ ಯದ ಬಗ್ಗೆ ಹಲವು ಬಾರಿ ಸೂಚಿಸಿದ್ದಾರೆ. ಹೊಟ್ಟೆ ತುಂಬಿಸುವ ಬಗ್ಗೆ ನೀವು ಎಚ್ಚರವಹಿಸಿರಿ, ಯಾಕೆಂದರೆ ಹೊಟ್ಟೆ ತುಂಬಿಸುವಿಕೆಯು ದೇಹವನ್ನು ಕೆಡಿಸಿ ರೋಗವನ್ನು ಆಮಂತ್ರಿಸಿ, ನಮಾಝ್ನಿಂ ದ ಉದಾಸೀನಗೊಳಿಸುತ್ತದೆ. ಆದ್ದರಿಂದ ನೀವು ಮಿತ ಆಹಾರ ಸೇವಿಸುವಿರಾಗಿ.’ ಅತಿಭೋಜನವನ್ನು ತೊರೆಯುವುದರಿಂದ ನಮಗೆ ಆರೋಗ್ಯಪೂರ್ಣ ದೇಹದೊಂದಿಗೆ ದೃಢ ಮನಸ್ಸನ್ನೂ ಪಡೆಯಬಹುದೆಂದು ಈ ಪ್ರವಾದಿ ವಚನದಿಂದ ಗ್ರಹಿಸಬಹುದು. ಯಾಕೆಂದರೆ ಅಮಿತ ಆಹಾರವು ದೇಹವನ್ನು ಕೆಡಿಸುವುದರೊಂದಿಗೆ ನಮಾಝ್ನಬಲ್ಲಿ ಮನಸ್ಸಿನ ಏಕಾಗ್ರತೆಯನ್ನು ಹಾಳುಗೆಡಹುತ್ತದೆ. ಇಮಾಮ್ ಗಝ್ಝಾಲಿ ತಮ್ಮ ಇಹ್ಯಾಉಲೂಮುದ್ದೀನ್ ನಲ್ಲಿ, ಅತಿಭೋಜನದ ಕೆಡುಕುಗಳನ್ನು ಎಣಿಸಿ ಹೇಳಿದ್ದಾರೆ: `ಅತಿ ಬೋಜನವು ಬುದ್ಧಿಯ ಪ್ರಕ್ರಿಯೆಗಳನ್ನು ಕೆಡಿಸಿ, ಹೃದಯದ ಒಳದೃಷ್ಟಿ ಯನ್ನು ನಷ್ಟಗೊಳಿಸುತ್ತದೆ. ಅದರಿಂದಾಗಿ ವಿಷಯ ಗಳನ್ನು ಸುಲಭದಲ್ಲಿ ಗ್ರಹಿಸಲು ಸಾಧ್ಯವಾಗುವುದಿಲ್ಲ’ ಅರ್ಥಾತ್, ಅಮಿತ ಆಹಾರವು ನಮ್ಮ ಬುದ್ಧಿ ಮತ್ತು ಮನಸ್ಸನ್ನು ಮರಗಟ್ಟಿಸಿ ತಿಳುವಳಿಕೆಯನ್ನು ನಾಶಗೊಳಿಸಿ ನಮ್ಮನ್ನು ಸಂಪೂರ್ಣವಾಗಿ ಸೋಮಾರಿಗಳನ್ನಾಗಿ ಮಾಡುತ್ತದೆ. ಪ್ರವಾದಿವರ್ಯರು(ಸ) ಹೇಳಿದರು: `ಹಸಿವೆಯು ಜ್ಞಾನದ ಪ್ರಕಾಶವಾಗಿದೆ. ಅಮಿತ ಭೋಜನವು ಅಲ್ಲಾಹನಿಂದ ದೂರವಾಗುವ ಸಂಕೇತವಾಗಿದೆ. ಆದ್ದರಿಂದ, ಅಮಿತ ಭೋಜನದಿಂದ ನಾವು ಹೃದ ಯದಿಂದ ಜ್ಞಾನದ ಪ್ರಕಾಶವನ್ನು ನಂದಿಸಿಬಿಡುತ್ತೇವೆ. 


ಅಮಿತ ಬೋಜನವನ್ನು ಪ್ರವಾದಿವರ್ಯರು(ಸ) ಅವಿಶ್ವಾಸಿಯ ಸ್ವಭಾವವೆಂದೂ ವರ್ಣಿಸಿದ್ದಾರೆ. ಬುಖಾರಿ ಮತ್ತು ಮುಸ್ಲಿಮ್ ಉದ್ಧರಿಸಿರುವ ಒಂದು ಹದೀಸ್ ನಲ್ಲಿ ಹೀಗಿದೆ: ಸತ್ಯವಿಶ್ವಾಸಿಯು ಒಂದು ಜಠರದಿಂದ ತಿನ್ನುವಾಗ ಅವಿಶ್ವಾಸಿಯು ಏಳು ಜಠರಗಳಲ್ಲಿ ತಿನ್ನುತ್ತಾನೆ. ಇಲ್ಲಿ ಸತ್ಯವಿಶ್ವಾಸಿ ಮತ್ತು ಅವಿಶ್ವಾಸಿಯ ಆಹಾರ ಶೈಲಿಯ ವ್ಯತ್ಯಾಸವನ್ನು ಸೂಚಿಸಲಾಗಿದೆ. ಮಿತಾಹಾರ ಸೇವನೆಯು ಸತ್ಯವಿಶ್ವಾಸಿಗೆ ಕೇವಲ ಆರೋಗ್ಯದಾಯಕ ಕರ್ಮ ಮಾತ್ರವಲ್ಲ, ಅವನ ಧಾರ್ಮಿಕ ಕರ್ತವ್ಯವೂ ಆಗಿದೆ. ಒಮ್ಮೆ ಡೊಳ್ಳೊಟ್ಟೆಯ ಓರ್ವರನ್ನು ಪ್ರವಾದಿ ವರ್ಯರು(ಸ) ನೋಡಿದಾಗ ಅವರ ಹೊಟ್ಟೆಗೆ ಬೆಟ್ಟು ಮಾಡಿ,ಇದು ಇಲ್ಲದಿರುತ್ತಿದ್ದರೆ ಅದೇ ನಿನಗೆ ಹಿತಕರವಾಗುತ್ತಿತ್ತು’ ಎಂದು ಹೇಳಿದರು. (ಅಹ್ಮದ್, ಬೈಹಕಿ) ಅಮಿತ ಆಹಾರ ಸೇವನೆಯಿಂದಾಗುವ ಡೊಳ್ಳೊಟ್ಟೆಯನ್ನು ಸೂಚಿಸಿ ಪ್ರವಾದಿ(ಸ) ಆ ರೀತಿ ಹೇಳಿದ್ದರು. ಆಹಾರವು ಒಂದು ಫ್ಯಾಶನ್ ಮತ್ತು ಆಡಂಬರದ ಪ್ರತೀಕವಾಗಿರುವ ಈ ಕಾಲದಲ್ಲಿ ಇಸ್ಲಾಮ್ ಆದೇಶಿಸಿರುವ ಹೊಟ್ಟೆಯ 3/2 ಭಾಗ ವನ್ನು ಆಹಾರ ಪಾನೀಯ ಮತ್ತು ಉಳಿದ ಭಾಗ ವನ್ನು ಉಸಿರಾಟಕ್ಕೆ ಅಡ್ಡಿಯಾಗದಂತೆ ಶೂನ್ಯವಾಗಿರಿಸಲು ಮಾನವನು ಸಿದ್ಧನಾದರೆ ಆತನಿಗೆ ಆರೋಗ್ಯ ಪೂರ್ಣ ದೇಹ ಮತ್ತು ಆರೋಗ್ಯಪೂರ್ಣ ಮನಸ್ಸು ಪ್ರಾಪ್ತವಾಗುತ್ತದೆ. ಆರೋಗ್ಯಪೂರ್ಣ ದೇಹವು ಇಸ್ಲಾಮಿನ ಗುರಿಯಾಗಿದೆ. ಆದ್ದರಿಂದಲೇ ಇಸ್ಲಾಮ್ ಸುವ್ಯವಸ್ಥಿತ ಮತ್ತು ವೈಜ್ಞಾನಿಕ ಆಹಾರ ಶೈಲಿಯನ್ನು ಕಲಿಸುತ್ತಿದೆ. ನಿರಂತರವಾದ ಒಂದು ತಿಂಗಳ ಉಪವಾಸವು ಇದಕ್ಕೊಂದು ಉತ್ತಮ ನಿದರ್ಶನ.

ಉಪವಾಸ ಮತ್ತು ಅಲ್ಲಾಹನ ಜೊತೆಗಿನ ಸಂಭಂಧ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಉಪವಾಸ ಎಲ್ಲಾ ತರಹದ ಕಾಪಟ್ಯತೆಯಿಂದ ಮುಕ್ತವಾದ ಇಬಾದತ್(ಪ್ರಾರ್ಥನೆ) ಆಗಿದೆ. ನಮಾಝ್, ಹಜ್, ಝಿಕ್ರ್ ಇದು ಶಾರೀರಿಕವಾಗಿ ಮಾಡುವಂತಹ ಪ್ರಾರ್ಥನೆಗಳಾಗಿವೆ. ಝಕಾತ್ ಇದು ಸಿರಿವಂತರ ಮೂಲಕ ಬಡವರು ಪಡೆಯುವಂತಹ ಆರ್ಥಿಕ ಪ್ರಯೋಜನಗಳು. ಇದನ್ನು ನಾವು ಕಣ್ಣಾರೆ ನೋಡಬಹುದು. ಆದರೆ ಉಪವಾಸ, ಇದರಲ್ಲಿ ಒಬ್ಬ ವ್ಯಕ್ತಿಯು ಅಲ್ಲಾಹನ ಸಂಪ್ರೀತಿಗಾಗಿ ಅನ್ನಪಾನೀಯಗಳನ್ನು ತೊರೆದು ದೈಹಿಕವಾದ ಎಲ್ಲಾ ಸುಖಗಳಿಂದ ತನ್ನನ್ನು ದೂರವಿರಿಸುತ್ತಾನೆ. ನಿಜವಾಗಿಯೂ ಇದರಲ್ಲಿ ಉಪವಾಸದಿಂದಿರುವ ವ್ಯಕ್ತಿಯು ಹಸಿವಿನಿಂದ ಇದ್ದಾನೋ ಅಥವಾ ಇಲ್ಲವೋ ಎಂದು ಸ್ವಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಾಹನನ್ನು ವಿಶೇಷವಾಗಿ ಭಯಪಟ್ಟು ಅವನು ಈ ತ್ಯಾಗಕ್ಕೆ ಅಣಿಯಾಗುತ್ತಾನೆ. ಇದರಿಂದಿ ನೇರವಾಗಿ ಅವನ ಸಂಭಂಧವು ಅಲ್ಲಾಹನ ಜೊತೆಗಿರುತ್ತದೆ.
ಇದಕ್ಕಾಗಿಯೇ, ಉಪವಾಸದ ಮಹತ್ವವನ್ನು ವಿವರಿಸುತ್ತಾ ಪ್ರವಾದಿ ಮುಹಮ್ಮದ್(ಸ್ವ.ಸ್ವ)ರವರು ಹೇಳುತ್ತಾರೆ, ಅಲ್ಲಾಹನು ಹೇಳುತ್ತಾನೆ, ಉಪವಾಸದ ಹೊರತು ಎಲ್ಲಾ ಪುಣ್ಯ ಕಾರ್ಯಗಳು ಅದನ್ನು ಮಾಡುವ ವ್ಯಕ್ತಿಗಾಗಿದೆ ಆದರೆ ಉಪವಾಸ ಹಾಗಲ್ಲ, ಇದು ನನಗಾಗಿದೆ ಹಾಗೂ ಇದರ ಪ್ರತಿಫಲವನ್ನು ನಾನೇ ಸ್ವತಃ ನೀಡುತ್ತೇನೆ( ಸಹೀಹ್ ಬುಖಾರಿ:). ಉಪವಾಸವನ್ನು ಅಲ್ಲಾಹನು ತನ್ನ ಜೊತೆಗೆ ಸಂಭಂಧಿಸಿದಾಗ ಇದರಲ್ಲಿ ತೋರಿಕೆಯ ಪ್ರಶ್ನೆಯೇ ಉಧ್ಬವಿಸುವುದಿಲ್ಲ. 


ಈ ಹದೀಸ್ ನ ಪ್ರಕಾರ ಒಂದು ಮಾತಂತು ನಮಗೆ ತಿಳಿಯುತ್ತದೆ, ಎಲ್ಲಾ ಇಬಾದತ್(ಪುಣ್ಯ ಕಾರ್ಯ) ಗಳ ಪ್ರತಿಫಲವನ್ನು ಅಲ್ಲಾಹನು ಮಲಾಯಿಕ್ (ದೇವದೂತರು) ಗಳ ಮುಖಾಂತರ ನೀಡುವನು ಆದರೆ ಉಪವಾಸದ ಪ್ರತಿಫಲವನ್ನು ಅಲ್ಲಾಹನು ಸ್ವತಃ ನೀಡುವನು. ತನ್ಮೂಲಕ ಅಲ್ಲಾಹನು ಉಪವಾಸವನ್ನು ಇಡುವ ತನ್ನ ದಾಸರನ್ನು ವಿಶೇಷವಾಗಿ ಗೌರವಿಸಿದ್ದಾನೆ. ನಿಜವಾಗಿಯೂ ಇದು ಒಂದು ವ್ಯಕ್ತಿಗೆ ಸಿಗುವಂತಹ ಮಹಾನ್ ಗೌರವವಾಗಿದೆ. ಸ್ವತಃ ಅಲ್ಲಾಹನೇ ತನ್ನ ವತಿಯಿಂದ ನೀಡುವಂತಹ ಪ್ರತಿಫಲಗಳು ಯಾವ ತರಹದ್ದಾಗಿರಬಹುದು ಇದನ್ನು ಊಹಿಸಲೂ ಅಸಾಧ್ಯ.

ಉಪವಾಸದ ಅರ್ಥ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಪವಿತ್ರ ಕುರ್ ಆನಿನ ಎರಡನೇ ಅಧ್ಯಾಯದಲ್ಲಿ ಅಲ್ಲಾಹನು ರಮಝಾನ್ ತಿಂಗಳ ಉಪವಾಸದ ಮಹತ್ವವನ್ನು ವಿವರಿಸುತ್ತಾ ಹೇಳುತ್ತಾನೆ.. ನಿಮಗೆ ಈ ತಿಂಗಳು ದೊರೆತಲ್ಲಿ ಇದರ ಉಪವಾಸವನ್ನು ಖಡ್ಡಾಯವಾಗಿ ನಿರ್ವಹಿಸಿ.(ಅಲ್ ಬಕರ:185) ಉಪವಾಸಕ್ಕೆ ಅರಬಿ ಭಾಷೆಯಲ್ಲಿ ಸಿಯಾಮ್ ಎಂದು ಕರೆಯುತ್ತೇವೆ. ಈ ಶಬ್ದದ ಅರ್ಥ “ನಿಲ್ಲಿಸಿ, ಕೊನೆಗೊಳಿಸಿ, ಅಂತ್ಯಗೊಳಿಸಿ” ಎಂದಾಗಿದೆ. ಹಾಗೂ ಶರೀಅತ್ ನಲ್ಲಿ ಬೆಳಗ್ಗಿನ ಜಾವದಿಂದ ಸೂರ್ಯಾಸ್ತಮಾನದ ವರೆಗೆ ಅನ್ನ ಪಾನೀಯಗಳನ್ನು ಸೇವಿಸುವುದರಿಂದ ಹಾಗೂ ಎಲ್ಲಾ ತರಹದ ದೈಹಿಕ ಆಸೆ ಆಕಾಂಕ್ಷೆಗಳಿಂದ ತನ್ನನ್ನು ತಡೆಯುವುದು, ದೂರವಿಡುವುದು ಎಂದಾಗಿದೆ.
ಅಲ್ಲಾಹನ ವಿವೇಚನಾತ್ಮಕ ಆದೇಶ :
ಹಾಗೆ ನೋಡುವುದಾದರೆ ಉಪವಾಸ ಒಂದು ಕಠಿಣವಾದ ದೈಹಿಕ ಶ್ರಮ ಎಂದು ನಮಗೆ ಕಂಡುಬರುತ್ತದೆ. ಅಲ್ಲಾಹನು ಇದನ್ನು ಸರಳಗೊಳಿಸಲು ಅತ್ಯಂತ ವಿವೇಚನಾತ್ಮಕವಾಗಿ ತನ್ನ ದಾಸರಿಗೆ ಹೇಳುತ್ತಾನೆ, ಉಪವಾಸವನ್ನು ನಿಮಗೆ ಕಡ್ಡಾಯಗೊಳಿಸಿದ್ದು ಇದೊಂದು ಹೊಸ ಆದೇಶವಲ್ಲ ಬದಲಾಗಿ ನಿಮಗಿಂತ ಮೊದಲು ಬಂದ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೂ ಕಡ್ಡಾಯಗೊಳಿಸಲಾಗಿತ್ತು.
ಒಂದು ಕಾರ್ಯವನ್ನು ಸಾಮೂಹಿಕವಾಗಿ ನಿರ್ವಹಿಸುವಾಗ ಅದು ಎಷ್ಟೇ ಕಷ್ಟ ಎಂದು ಕಂಡು ಬಂದರೂ ಅದಕ್ಕೆ ನಾವು ಸುಲಭವಾಗಿ ಹೊಂದಿಕೊಂಡು ಹೋಗುತ್ತೇವೆ. ಇದೊಂದು ಸ್ವಾಭಾವಿಕ ವಿಷಯ. ಇದಕ್ಕಾಗಿಯೇ ಅಲ್ಲಾಹನು ಆದಿಪಿತ ಆದಮ್(ಅ.ಸ.) ರಿಂದ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ್ವ.ಸ್ವ.) ರ ವರೇಗೆ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೂ ನಮಾಝ್ ಹಾಗೂ ಉಪವಾಸವನ್ನು ಕಡ್ಡಾಯಗೊಳಿಸಿದ್ದನು.
ಉಪವಾಸದ ಉದ್ದೇಶ :
ಉಪವಾಸವನ್ನು ಕಡ್ಡಾಯಗೊಳಿಸುವ ಜೊತೆಗೆ ಅಲ್ಲಾಹನು ಅತ್ಯಂತ ಸ್ಪಷ್ಟವಾಗಿ ಅದರ ಉದ್ದೇಶವನ್ನೂ ವಿವರಿಸುತ್ತಾ ಹೇಳುತ್ತಾನೆ, ಓ ಸತ್ಯ ವಿಶ್ವಾಸಿಗಳೇ, ನಿಮ್ಮ ಮೇಲೆ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ ನಿಮಗಿಂತ ಮುಂಚಿನ ಉಮ್ಮತ್ (ಅನುಯಾಯಿಗಳು) ಗಳ ಮೇಲೆ ಕಡ್ಡಾಯಗೊಳಿಸಿದ ಹಾಗೆ, ನಿಮ್ಮಲ್ಲಿ ತಕ್ವಾ(ದೇವ ಭಕ್ತಿ) ಉಂಟು ಮಾಡಲಿಕ್ಕಾಗಿ.( ಕುರ್ ಆನ್:ಅಲ್ ಬಕರ:183) ಸೂಕ್ಷವಾಗಿ ಗಮನಿಸಿದರೆ, ನಮ್ಮಲ್ಲಿ ದೇವ ಭಕ್ತಿ ಉಂಟು ಮಾಡುವಲ್ಲಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಅನ್ನ ಪಾನೀಯಗಳನ್ನು ಸೇವಿಸುವುದರಿಂದ ಹಾಗೂ ಮನುಷ್ಯನು ದೈಹಿಕ ಆಸೆ ಆಕಾಂಕ್ಷೆಗಳ ಗುಲಾಮನಾಗುವುದರಿಂದ ಖಂಡಿತವಾಗಿಯೂ ಆ ವಸ್ತುಗಳ ದಾಸನಾಗುತ್ತಾನೆ. ಇದರಿಂದ ದ್ವೇಷ, ಅಸೂಯೆ, ಕೋಪ, ದುರಹಂಕಾರ, ದೌರ್ಜನ್ಯ ಮುಂತಾದ ಹಲವು ಕೆಟ್ಟ ಗುಣಗಳು ಹುಟ್ಟಿಕೊಳ್ಳುತ್ತವೆ. ನಿರಂತರವಾದ ಒಂದು ತಿಂಗಳ ಉಪವಾಸವು ಎಲ್ಲಾ ತರಹದ ದುರ್ಗುಣಗಳಿಂದ ತನ್ನನ್ನು ಹತೋಟಿಯಲ್ಲಿಡಲು ಬಲು ಸಹಕಾರಿ. 

ಒಂದೇ ಸಮನೆ ಒಂದೇ ತರಹದ ಇಬಾದತ್ ಗಳನ್ನು ಮಾಡುವುದರಿಂದ ಧಾರ್ಮಿಕ ಚೌಕಟ್ಟಿನಲ್ಲಿದ್ದು, ತಕ್ವಾ(ದೇವಭಯ)ದ ಮೂಲಕ ಜೀವನ ನಡೆಸುವಂತಹ ಸೌಭಾಗ್ಯವನ್ನು ಅಲ್ಲಾಹನು ನೀಡುತ್ತಾನೆ. ಉಪವಾಸದ ಮೂಲಕ ಒಬ್ಬ ವ್ಯಕ್ತಿ, ಅನ್ನಪಾನೀಯಗಳನ್ನು ಸೇವಿಸುವುದು ಮುಂತಾದ ಧರ್ಮ ಸಮ್ಮತ ಕಾರ್ಯಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ತ್ಯಜಿಸುವಾಗ ಧರ್ಮಸಮ್ಮತವಲ್ಲದ ಕಾರ್ಯಗಳಿಂದ ದೂರವಿರುವುದು ಅವನಿಗೆ ಸುಲಭವಾಗುತ್ತದೆ. ಇದೇ ನೈಜ ತಕ್ವಾ(ದೇವಭಯ). ಹಾಗೂ ಇದರಿಂದ ಸ್ವೇಚ್ಚಾಚಾರದಿಂದ ದೂರವಿದ್ದು ಅಲ್ಲಾಹನ ಆಜ್ಞಾನುಸಾರ ಜೀವನ ನಡೆಸುವಂತಹ ಅಪಾರ ಶಕ್ತಿ ನಮಗೆ ಲಭಿಸುತ್ತದೆ. ಒಂದು ತಿಂಗಳ ಉಪವಾಸದಿಂದ ಒಬ್ಬ ವ್ಯಕ್ತಿಯಲ್ಲಿ ಅಲ್ಲಾಹನನ್ನು ಭಯಪಡುವಂತಹ ವಿಶೇಷ ಗುಣ ಉಂಟಾದಲ್ಲಿ ಇಹಲೋಕದಲ್ಲಿಯೂ, ಪರಲೋಕದಲ್ಲಿಯೂ ಇದರ ಉತ್ತಮ ಪ್ರತಿಫಲ ಸಿಗುವುದು ಖಂಡಿತ. ಇದುವೇ ಉಪವಾಸದ ನೈಜ ಉದ್ದೇಶ.