ವರದಕ್ಷಿಣೆ ಪಡೆಯುವವರ ನಿಖಾಃವನ್ನು ತಡೆಯುವ ನಿರ್ಧಾರ
ಬಿಹಾರದ,ನಳಂದ ಜಿಲ್ಲೆಯ ಮಸೀದಿಯ ಇಮಾಮರು (ಧಾರ್ಮಿಕ ಗುರುಗಳು) ವರದಕ್ಷಿಣೆಯ ಬಗ್ಗೆ ತೆಗೆದುಕೊಂಡ ನಿರ್ಧಾರ, ಮುಸ್ಲಿಂ ವಲಯದಲ್ಲಿ ಭಾರೀ ಜನಪ್ರೀಯತೆಯನ್ನು ಗಳಿಸಿಕೊಂಡಿದೆ. ಹಾಗೂ ಮುಸ್ಲಿಂ ಭಾಂಧವರು ತಮ್ಮ ಎಲ್ಲಾ ಸಲಹೆ ಸಹಕಾರಗಳನ್ನು ನೀಡುವ ಭರವಸೆಯನ್ನೂ ನೀಡಿದ್ದಾರೆ.
ಈ ಬಗ್ಗೆ ಕಳೆದ ವಾರ ನಳಂದಜಿಲ್ಲೆಯ ಕಾಝಿಯವರು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂಧರ್ಭದಲ್ಲಿ ಜಿಲ್ಲೆಯ ಎಲ್ಲಾ ಮಸೀದಿಗಳ ಇಮಾಮರು, ವರದಕ್ಷಿಣೆ ಕೊಡುವವರು ಹಾಗೂ ಪಡಕೊಳ್ಳುವವರ ಮದುವೆ ಸಮಾರಂಭದಲ್ಲಿ ನಿಖಾವನ್ನು ಮಾಡದಿರಲು ನಿರ್ಧರಿಸಿರುತ್ತಾರೆ. ದಿನಂಪ್ರತಿ ಹೆಚ್ಚುತ್ತಿರುವ ವರದಕ್ಷಿಣೆ ಸಮಸ್ಯೆಗಳಿಂದಾಗಿ ಉಂಟಾಗುವ ಪರಿಣಾಮಗಳ ಬಗ್ಗೆ ತೀವ್ರ ನೊಂದು ವಾರದ ಹಿಂದೆ ನಡೆದ ಸಮಾರಂಭದಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಈ ತೀರ್ಪಿನ ವರದಿಯನ್ನು ನಳಂದ ಜಿಲ್ಲೆಯ ಕಾಝಿಯವರಾದ ಮೌಲಾನಾ ಮನ್ಸೂರ್ ಆಲಮ್ ರವರು ಎಲ್ಲರ ಮುಂದೆ ಪ್ರಕಟಿಸಿದರು. ನಿಜವಾಗಿಯೂ, ವರದಕ್ಷಿಣೆ ಪಡೆಯುವವರ ವಿರುಧ್ಧ ತೆಗೆದುಕೊಂಡಂತಹ ಈ ನಿಲುವು ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಈ ಮಹತ್ವದ ಹೆಜ್ಜೆ ವರದಕ್ಷಿಣೆಗಾಗಿ ಹಾತೊರೆಯುವವರಲ್ಲಿ ಸಂಚಲನ ಮೂಡಿಸಿದೆ. ಅವರು ಈಗ ಅಧೀರರಾಗಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ವರದಕ್ಷಿಣೆ ಪಡೆಯುವವರ ವಿರುಧ್ದ ಇದೊಂದು ಸಾಮಾಜಿಕ ಬಹಿಷ್ಕಾರವೂ ಆಗಿದೆ. ಈ ನಿರ್ಧಾರದಲ್ಲಿ ನಾವು ನಳಂದ ಜಿಲ್ಲೆಯಲ್ಲಿ ಸಫಲರಾದಲ್ಲಿ ಬಿಹಾರದ ಇನ್ನುಳಿದ ಜಿಲ್ಲೆಗಳಲ್ಲಿಯೂ ಇದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಮೌಲಾನಾ ಮನ್ಸೂರ್ ಆಲಮ್ ರವರು ಹೇಳಿದರು. ಇದಕ್ಕಾಗಿ ಇನ್ನುಳಿದ ಎಲ್ಲಾ ಜಿಲ್ಲೆಗಳ ಮಸೀದಿಗಳ ಇಮಾಮರುಗಳನ್ನು ಒಟ್ಟುಗೂಡಿಸಿ ತಾವೂ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಿದ್ದೇವೆ ಎಂದಿದ್ದಾರೆ. ಮುಸ್ಲಿಂ ವಲಯದಲ್ಲಿ ಈ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸಲಾಗಿದೆ.
ಪವಿತ್ರ ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಎಂಬ ಕಲ್ಪನೆಯೇ ಇಲ್ಲ. ಆದರೂ ಇನ್ನೂ ಹಲವು ಕಡೆ ಮುಸ್ಲಿಮರ ನಡುವೆ ಈ ಅನಿಷ್ಟ ಪದ್ದತಿ ಜೀವಂತವಿರುವುದು ಬಹುದೊಡ್ಡ ದೌರ್ಭಾಗ್ಯಪೂರ್ಣ ವಿಷಯ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಉಲಮಾ ಉಮರಾಗಳು ಒಟ್ಟು ಸೇರಿ ಇಂತಹದೇ ತೀರ್ಮಾನವನ್ನು ತೆಗೆದುಕೊಂಡಿದ್ದರೆ ಖಂಡಿತವಾಗಿಯೂ ಅದು ಸಮಾಜದಲ್ಲಿ ಬಹುದೊಡ್ಡ ಪರಿಣಾಮವನ್ನು ಬೀರಬಹುದು.