Monday, 29 June 2015

ಅನಿವಾಸಿ ಕನ್ನಡಿಗರ ಕಣ್ಮಣಿ “ ವಿಶ್ವ ಕನ್ನಡಿಗ ನ್ಯೂಸ್”


ಅಸ್ಸಲಾಮು ಅಲೈಕುಂ,
        ಕನ್ನಡಿಗರ ಅಚ್ಚುಮೆಚ್ಚಿನ ಅಂತರ್ಜಾಲ ಪತ್ರಿಕೆಯಾದ "ವಿಶ್ವ ಕನ್ನಡಿಗ ನ್ಯೂಸ್" ಇದೀಗ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಅಲ್ ಹಮ್ದುಲಿಲ್ಲಾಹ್. ಗಲ್ಫ್ ರಾಜ್ಯಗಳಲ್ಲಿ ದುಡಿಯುವವರ ಕಾರ್ಯನಿಬಿಡತೆ ಎಲ್ಲಾ ಅನಿವಾಸಿಗಳಿಗೂ ತಿಳಿದಿರುವ ವಿಚಾರ. ಆದರೂ ತನ್ನ ದೇಶ,ರಾಜ್ಯ,ಹಾಗೂ ಸುತ್ತುಮುತ್ತಲಿನ ಪರಿಸರದ ಮೇಲೆ ಪ್ರೇಮವನ್ನಿಟ್ಟು ಅದರಲ್ಲೂ ರಾಜ್ಯಭಾಷೆಯಾದ ಕನ್ನಡದ ಉಳಿವಿಗಾಗಿ ನಿರಂತರ ಪ್ರಯತ್ರಿಸುತ್ತಿರುವುದು ತುಂಬಾ ಸಂತೋಷದ ವಿಚಾರ.
ಪ್ರಧಾನ ಸಂಪಾದಕರಾದ ಸಿ.ಎಚ್.ಅಬ್ದುಲ್ ಹಮೀದ್ ರವರನ್ನು ಎಷ್ಟು ಹೊಗಳಿದರೂ ಸಾಲದು. ಇವರು ರಫೀಕ್ ಕೋಲ್ಪೆ, ಇರ್ಶಾದ್ ಬೈರಿಕಟ್ಟೆ, ಅನ್ಸಾರ್ ಬೆಳ್ಳಾರೆ, ನಿತೀನ್ ರೈ ಕುಕ್ಕುವಳ್ಳಿ ಹಾಗೂ ನುರಿತ ಕನ್ನಡ ಪ್ರೇಮಿಗಳ ತಂಡವನ್ನು ತನ್ನ ಜೊತೆಗೆ ಇಟ್ಟುಕೊಂಡು ನಿರಂತರವಾಗಿ ದೇಶ, ವಿದೇಶಗಳ ತಾಜಾ ಸುದ್ದಿಗಳನ್ನು ಆಯಾಯ ಸಮಯದಲ್ಲೇ ತಲುಪಿಸುವಲ್ಲಿ ವಿಶೇಷ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದೇ ಹೆಸರು, ಖ್ಯಾತಿ, ಪ್ರಶಸ್ತಿಗಳ ಬೆನ್ನತ್ತಿ ಈ ಬಳಗ ಹೋಗದಿರುವುದು ತುಂಬಾ ಉತ್ತಮ ವಿಚಾರ.
 ಅದೆಷ್ಟೋ ಬರಹ ಪ್ರೇಮಿಗಳಿಗೆ ಈ ಅಂತರ್ಜಾಲ ಪತ್ರಿಕೆಯು ಉತ್ತಮ ವೇದಿಕೆಯಾಗಿದೆ. ಯುವ ಬರಹಗಾರರ ಹೊಸ ಹೊಸ ಬರಹಗಳನ್ನು ನಿರ್ಲಕ್ಷಿಸಲಿಲ್ಲ. ಬದಲಾಗಿ ಅದನ್ನು ತಿದ್ದಿ ತೀಡಿ ಪ್ರಕಟಣಾ ಯೋಗ್ಯವನ್ನಾಗಿ ಮಾಡಿದ ಹೆಮ್ಮೆ ಇದಕ್ಕೆ ಸಲ್ಲಬೇಕು. ಇದರಿಂದ ಹೊಸ ಬರಹಗಾರರು ಇನ್ನಷ್ಟು ಬರಹ ಪ್ರೇಮಿಗಳಾಗಲು ಸಹಕಾರಿಯಾಯಿತು. ಈ ಮೂಲಕ ಅದೆಷ್ಟೋ ಬರಹಗಾರರನ್ನು ಸೃಷ್ಟಿಸಿದ ಖ್ಯಾತಿ ಈ ಪತ್ರಿಕೆಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಐದು ಸಂವತ್ಸರಗಳು ತುಂಬುತ್ತಿರುವ ಈ ಸಂಧರ್ಭದಲ್ಲಿ ಎಲ್ಲಾ ಪತ್ರಿಕೆಯ ಬಳಗದವರಿಗೂ ನನ್ನ ಹೃದಾಯಾಂತರಾಳದ ಅಭಿನಂದನೆಗಳು. ಅಲ್ಲಾಹು ತಮ್ಮ ಈ ಸೇವೆಯನ್ನು ಸ್ವೀಕರಿಸಲಿ. ಇನ್ನು ಮುಂದಕ್ಕೂ ಇನ್ನಷ್ಟು ಎತ್ತರಕ್ಕೆ ಬೆಳೆಯುವ ತೌಫೀಕ್ ನೀಡಲಿ. ಎಲ್ಲಾ ಸೇವೆಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ಮೀಸಲಿಡುವ ಗುಣವನ್ನು ಬೆಳೆಸಿಕೊಳ್ಳುವ ಹೃದಯವನ್ನು ನೀಡಲಿ (ಆಮೀನ್ ಯಾ ರಬ್ಬಲ್ ಆಲಮೀನ್)

ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

ಮಾನವ ವಿಮೋಚಕ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ಮತ್ತು ರಮಝಾನ್




ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರವರು ಬಂದಂತಹ ಸಮುದಾಯವು ಗತ ಪ್ರವಾದಿಗಳ ಶಿಕ್ಷಣಗಳನ್ನು ಸಂಪೂರ್ಣವಾಗಿ ವಿರೂಪಗೊಳಿಸಿದಂತಹ ಸಮುದಾಯವಾಗಿತ್ತು. ಇಲ್ಲಿ ಮಾನವತೆಯು ಮರೀಚಿಕೆಯಾಗಿತ್ತು. ಅಲ್ಲಾಹನ ತೌಹೀದ್(ಏಕದೇವತ್ವ) ನ್ನು ವಿಕಾರಗೊಳಿಸಲಾಗಿತ್ತು. ಜಾಗತಿಕ ಮುಸ್ಲಿಮರ ಕೇಂದ್ರ ಬಿಂದುವಾಗಿದ್ದ ಪವಿತ್ರ ಕಅಬಾ ಭವನವದ ನಗ್ನವಾಗಿ ತವಾಫ್(ಪ್ರದಕ್ಷಿಣೆ) ಮಾಡಲಾಗುತ್ತಿತ್ತು. ಇಲ್ಲಿ ಮೂರ್ತಿಗಳನ್ನು ಪ್ರತಿಷ್ಥಾಪಿಸಿ ಅದಕ್ಕೆ ಸಾಷ್ಥಾಂಗವೆರಗುತ್ತಾ, ಅವುಗಳ ಮುಖಾಂತರ ಸಹಾಯ ಯಾಚಿಸುವುದನ್ನೇ ನೈಜ ದಾಸ್ಯಾರಾಧನೆ ಎಂದು ಭಾವಿಸಲಾಗಿತ್ತು. ಮನುಷ್ಯ ಮನುಷ್ಯರ ನಡುವಿನ ಸಂಭಂಧಗಳು ಹಳಸಿ ಹೋಗಿ, ಸಣ್ಣ ಪುಟ್ಟ ವಿಷಯಗಳನ್ನು ವಿಷಯಾಂತರವನ್ನಾಗಿ ಮಾಡಿ ತಲೆ ತಲಾಂತರದವರೆಗೆ ಜಗಳಗಳನ್ನು ಹುಟ್ಟು ಹಾಕಲಾಗುತ್ತಿತ್ತು. ಮಾನವ ಸಂಭಂಧಗಳು ಕೆಟ್ಟು ನುಚ್ಚು ನೂರಾಗಿದ್ದವು. ಕುಟುಂಬದ ಕಣ್ಣಾದ ಹೆಣ್ಣು ಅಗೌರವದ ಸಂಕೇತವಾಗಿತ್ತು. ಇದಕ್ಕೆ ಪ್ರತಿಯಾಗಿ ಅವರು ಹೆಣ್ಣು ಹುಟ್ಟಿದಾಕ್ಷಣ ಜೀವಂತ ಸಮಾಧಿ ಮಾಡಲು ಹಿಂಜರಿಯುತ್ತಿರಲಿಲ್ಲ. ಒಟ್ಟಲ್ಲಿ ಮಾನವ ಸಂಭಂಧಗಳು ಹಳಸಿ ಹೋಗಿ ಅನಾಗರಿಕತೆಯು ತಾಂಡವಾಡುತ್ತಿತ್ತು. ಸಂಪೂರ್ಣ ಅಲ್ಲೋಲ ಕಲ್ಲೋಲವಾದಂತಹ ಕಾರ್ಗತ್ತಲು ಆವರಿಸಿದಂತಹ ಸಮುದಾಯದಲ್ಲಿ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ಹುಟ್ಟಿ ಬಂದರು.
            ಇಂತಹ ಘನಘೋರ ಕತ್ತಲೆಯಲ್ಲಿ ಮನುಷ್ಯರನ್ನು ನೈಜತೆಯೆಡೆಗೆ ತರುವುದೆಂದರೆ ಅದು ಕಬ್ಬಿಣದ ಕಡಲೆಯೇ ಸರಿ. ಅಲ್ಲಾಹನು ಇಡೀ ಜಗತ್ತಿನಲ್ಲಿ ಆವರಿಸಿದಂತಹ ಕತ್ತಲೆಯನ್ನು ನಿವಾರಿಸಲಿಕ್ಕಾಗಿ ಸತ್ಯಸಂಧ, ನಿಷ್ಕಲ್ಮಷ ಹೃದಯವುಳ್ಳ, ಮಾನವ ವಿಮೋಚಕ, ಕರುಣಾಮಯಿಯಾದ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರನ್ನು ತನ್ನ ದಿವ್ಯ ವಚನಗಳನ್ನು ನೀಡಿ ಕಳುಹಿಸಿದ. ಹೃದಯಗಳನ್ನು ಬೆಳಗಿಸುವಂತಹ ಈ ವಚನಗಳ ಮೂಲಕ ಪ್ರವಾದಿ (ಸ್ವ.ಸ್ವ) ರವರು ಕಲ್ಲುಮಳ್ಳುಗಳ ಹಾದಿಗಳನ್ನು ಸವೆಸಿ ಅನಾಗಕರಿಕರನ್ನು ನಾಗರಿಕತೆಯೆಡೆಗೆ ತರುವಲ್ಲಿ ಸಂಪೂರ್ಣ ಯಶಸ್ವಿಯಾದರು. ಸತ್ಯ ಅಸತ್ಯಗಳ ನಡುವಿನ ವ್ಯತ್ಯಾಸವನ್ನೂ ಮಾನವತೆಯ ಗೌರವ ಘನತೆಗಳನ್ನೂ ತೋರಿಸಿ ಕೊಟ್ಟರು. ಅಲ್ಲಾಹನ ಹಾಗೂ ಅವನ ದಾಸರ ನಡುವಿನ ಸಂಭಂಧಗಳನ್ನು ಪರಿಚಯಿಸಿ ಅವರ ಹೃದಯಗಳಲ್ಲಿ ದೇವ ಭಯ ಉಂಟಾಗುವ ವಾತಾವರಣವನ್ನು ನಿರ್ಮಿಸಿದರು. ನಿರಂತರವಾದ ತರಬೇತಿಗಳ ಮೂಲಕ ವರ್ಣ ಭೇಧ, ಜಾತಿ ಭೇಧ, ಕುಟುಂಬ ಕಲಹಗಳಂತಹ ಮಾನವ ವಿರೋಧಿ ನೀತಿಗಳಿಂದ ಹೊರತರಲು ಶ್ರಮಿಸಿದರು.
            ಪವಿತ್ರ ರಮಝಾನ್ ಕುರ್ ಆನ್ ಅವತೀರ್ಣವಾದ ತಿಂಗಳಾಗಿದೆ. ಮನುಷ್ಯರಿಗೆ ಸುವ್ಯಕ್ತವಾದ ಶಿಕ್ಷಣವನ್ನು ನೀಡಿ ಸತ್ಯ ಪಥದತ್ತ ಕೊಂಡೊಯ್ಯಲು ದಾರಿ ತೋರಿಸುವ ಗ್ರಂಥ ಅದಾಗಿದೆ. ಆದ್ದರಿಂದ ಯಾರಾದರೂ ಈ ತಿಂಗಳನ್ನು ಹೊಂದಿದಲ್ಲಿ ಈ ತಿಂಗಳ ಸಂಪೂರ್ಣ ಉಪವಾಸವನ್ನು ಆಚರಿಸಬೇಕು ಎಂಬ ಆಜ್ಞೆಯನ್ನು ಅಲ್ಲಾಹನು ನೀಡುತ್ತಾನೆ. (ಕುರ್ ಆನ್ 2; 185).
            “ಇರುಳಿನ ಕರಿ ರೇಖೆಯಿಂದ ಉಷಾ ಕಾಲದ ಬಿಳಿರೇಖೆಯು ನಿಮಗೆ ಬೇರ್ಪಟ್ಟು ತೋರುವ ವರೆಗಿನ ನಿಶಾವಧಿಯಲ್ಲಿ ತಿನ್ನಿರಿ, ಕುಡಿಯಿರಿ. ಅನಂತರ ಈ ಕಾರ್ಯಗಳನ್ನೆಲ್ಲಾ (ದೈಹಿಕ ಕಾಮನೆಗಳ ಹೊರತು) ರಾತ್ರಿಯ ವರೆಗೆ ನಿಮ್ಮ ಉಪವಾಸವನ್ನು ಪೂರ್ತಿಗೊಳಿಸಿರಿ. (ಕುರ್ ಆನ್ 2:187)
ಪ್ರವಾದಿ ಮುಹಮ್ಮದ್(ಸ್ವ.ಸ್ವ) ರವರ ನಿರಂತರವಾದ ತರಬೇತಿಗಳಿಂದ ಎಚ್ಚೆತ್ತು ಸತ್ಯವಿಶ್ವಾಸಿಗಳಾದ ಅರಬರು ಅಲ್ಲಾಹನ ಆದೇಶಕ್ಕೆ ತಲೆಬಾಗಿದರು. ಒಂದು ತಿಂಗಳ ಸಂಪೂರ್ಣ ಉಪವಾಸವು ಹಾಗೂ ದೈಹಿಕ ಬಯಕೆಗಳ ನಿಂತ್ರಣವು ಅವರಲ್ಲಿ ದೇವ ಭಯವನ್ನು ಉಂಟು ಮಾಡುವಲ್ಲಿ ಸಹಕಾರಿಯಾಯಿತು. ನೆರೆಮನೆಯ ಒಂದು ಪ್ರಾಣಿಯು ನೀರು ಕುಡಿದ ಕಾರಣಕ್ಕಾಗಿ ತಲೆಮಾರುಗಳ ವರೆಗೆ ಜಗಳ ಮಾಡುವವರು ತನ್ನ ಸಂಪತ್ತಿನ ಒಂದು ಪಾಲನ್ನು ನೆರೆಯವನಿಗೆ ನೀಡುವಷ್ಟು ಉದಾರಿಗಳಾದರು. ದ್ವೇಷ, ವೈರತ್ವದ ಬದಲು ಸಹನಾಶೀಲರಾಗಿ ಬಾಳುವಷ್ಟು ಎತ್ತರಕ್ಕೇರಿದರು. ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರವರು ಹಾಕಿ ಕೊಟ್ಟ ಸನ್ಮಾರ್ಗವು ಅಂದೂ ಪ್ರಸ್ತುತ ಇಂದೂ ಪ್ರಸ್ತುತ. ಈ ಲೋಕದ ಅಂತ್ಯದವರೆಗೂ ಪ್ರಸ್ತುತವೇ ಆಗಿದೆ.
ಪವಿತ್ರ ರಮಝಾನ್ ಮಾಸದ ಮೊದಲ ಹತ್ತು ದಿವಸ ನಮ್ಮನ್ನಗಲಿದೆ. ಇವು ಅಲ್ಲಾಹನ ರಹ್ ಮತ್ ನ ದಿನಗಳಾಗಿದ್ದವು. ಇಂದಿನಿಂದ ಎರಡನೇ ಹತ್ತು ಪ್ರಾರಂಭ. ಇವು ಮಗ್ ಫಿರತ್ ಗಳಿಂದ ಕೂಡಿದ ಪುಣ್ಯ ದಿವಸಗಳಾಗಿವೆ. ಅಲ್ಲಾಹು ನಮ್ಮೆಲ್ಲರ ಮೊದಲ ಹತ್ತು ಉಪವಾಸಗಳನ್ನು ಸ್ವೀಕರಿಸಿ ಮಧ್ಯದ ಹತ್ತು ದಿನಗಳಲ್ಲಿ ಚಾಚೂ ತಪ್ಪದೇ ಅವನ ಆಜ್ಞಾನುಸಾರ ಇಬಾದತ್ ಮಾಡುವ ತೌಫೀಕ್ ನಮಗೆ ನೀಡಲಿ. ಹಾಗೂ ಅವನ ನೈಜ ದಾಸರಾಗುವ ತೌಫೀಕ್ ನಮಗೆ ಲಭಿಸಲಿ (ಆಮೀನ್).


ಲೇಖನ : ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

ಕೆಡುಕು ಮುಕ್ತ ಸಮಾಜ ಮತ್ತು ರಮಝಾನ್




ಸುಳ್ಳಾಡುವುದು ಮನುಷ್ಯನ ಬಹು ದೊಡ್ಡ ದೌರ್ಬಲ್ಯವಾಗಿದೆ. ಇದರ ದುಷ್ಪರಿಣಾಮ ಸುಳ್ಳು ಹೇಳುವವನಿಗೆ ಮಾತ್ರವಲ್ಲ, ಸಮಾಜದ ಮೇಲೂ ಬೀಳುತ್ತದೆ. ಇದು ಕೆಡುಕುಗಳಲ್ಲಿ ಅತ್ಯಂತ ಪ್ರಭಾವಶಾಲಿ ಕೆಡುಕು. ಒಬ್ಬ ವ್ಯಕ್ತಿಯು ಸುಳ್ಳನ್ನು ತ್ಯಜಿಸಿದಲ್ಲಿ ಎಲ್ಲಾ ಕೆಡುಕುಗಳಿಂದ ಮುಕ್ತರಾಗಲು ಸಾಧ್ಯವಿದೆ ಎಂಬುದು ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಅ) ರವರ ಶಿಕ್ಷಣವಾಗಿದೆ.
          ರಂಝಾನ್ ತಿಂಗಳ ಉಪವಾಸವಿದ್ದವನು ಸುಳ್ಳಾಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಪ್ರವಾದಿಯವರು ವಿಶೇಷವಾಗಿ ಒತ್ತು ಕೊಟ್ಟು ಹೇಳಿದ್ದಾರೆ. “ ಒಬ್ಬನು ಸುಳ್ಳಾಡುವುದನ್ನು , ಸುಳ್ಳು ವ್ಯವಹಾರ ಮಾಡುವುದನ್ನು ಬಿಡದಿದ್ದರೆ ಅವನು ಆಹಾರ ಪಾನೀಯಗಳನ್ನು ಬಿಡಬೇಕೆಂಬ ಅಪೇಕ್ಷೆ ಅಲ್ಲಾಹನಿಗೆ ಇಲ್ಲವೇ ಇಲ್ಲ” (ಹದೀಸ್).
          ಮನುಷ್ಯನ ಇನ್ನೊಂದು ದೌರ್ಬಲ್ಯ ಅಸಹನೆ. ಪರಸ್ಪರ ಹಗೆತನ, ಅಸಹಕಾರ, ಮತ್ಸರ, ಕ್ರೋಧ, ಪ್ರತೀಕಾರ ಮನೋಭಾವ, ಸಂಘರ್ಷ ಮುಂತಾದ ಹಲವು ಕೆಡುಕುಗಳಿಗೆ ಅಸಹನೆಯು ಪ್ರೇರಣೆಯಾಗಿದೆ. ಒಂದು ತಿಂಗಳ ಉಪವಾಸವು ಸತ್ಯವಿಶ್ವಾಸಿಯನ್ನು ಈ ಕೆಡುಕುಗಳಿಂದ ತನ್ನನ್ನು ದೂರೀಕರಿಸಲು ಬಲು ಸಹಕಾರಿ. ಆದ್ದರಿಂದಲೇ ಪ್ರವಾದಿ ಮುಹಮ್ಮದ್ (ಸ್ವ.ಅ) ರವರು ಹೇಳಿರುವುದು. “ ಉಪವಾಸವಿರುವವನು ಜಗಳ, ಗಲಾಟೆಗಳಿಂದ ದೂರವಿರಬೇಕು. ಆತನನ್ನು ಯಾರಾದರೂ ಬೈದರೆ ಅಥವಾ ಅವನೊಡನೆ ಜಗಳಕ್ಕೆ ಬಂದರೆ, ಸಹೊದರಾ, ನಾನು ಉಪವಾಸವಿದ್ದೇನೆ ಎಂದು ಹೇಳಿ ತಪ್ಪಿಸಿಕೊಳ್ಳಬೇಕು.(ಹದೀಸ್)
ಇಂದು ಜಗತ್ತಿನಾದ್ಯಂತ ನಡೆಯುವ ನಾನಾ ತರಹದ ಸಂಘರ್ಷಗಳಿಗೆ ಮೂಲ ಕಾರಣ ಅಸಹನೆ. ಇದಕ್ಕಾಗಿಯೇ ಪ್ರವಾದಿಯವರು ಒಬ್ಬ ಸತ್ಯವಿಶ್ವಾಸಿಯ ಉಪವಾಸವು ಬರೇ ಅನ್ನ ಪಾನೀಯಗಳನ್ನು ತೊರೆಯುವುದಕ್ಕಾಗಿಯೇ ಸೀಮಿತವಾಗಿರಬಾರದು ಬದಲಾಗಿ ಅವನಲ್ಲಿ ಸಹಾನಾಶೀಲತೆಯು ಜಾಗೃತಗೊಳ್ಳಬೇಕು ಎಂದು ಹೇಳಿರುವುದು.
ಪ್ರವಾದಿ (ಸ್ವ.ಅ) ರವರು ತೋರಿಸಿ ಕೊಟ್ಟ ತರಬೇತಿಗಳ ಮೂಲಕ ನಿರಂತರ ಒಂದು ತಿಂಗಳ ಉಪವಾಸವನ್ನು ಆಚರಿಸಿದ್ದಲ್ಲಿ ಅದೊಂದು ಅಭ್ಯಾಸವಾಗಿ ಮಾರ್ಪಡುತ್ತದೆ ಎಂಬುದು ಧೃಢ ಸತ್ಯ. ಅಲ್ಲಾಹನ ಆದೇಶಗಳ ಪಾಲನೆ, ದೈಹಿಕವಾದ ಎಲ್ಲಾ ಕೆಡುಕುಗಳಿಂದ ತನ್ನನ್ನು ಮುಕ್ತಗೊಳಿಸಿ, ಅವನ ದಾಸರೊಂದಿಗೆ ಉತ್ತಮ ಭಾಂಧವ್ಯವು ಬೆಳೆಸಬೇಕು. ಇದರ ಮೂಲಕ ಅದೆಂತಹ ಪರಿಣಾಮಕಾರಿ ಸಮಾಜವನ್ನು ನಾವು ನೋಡಲು ಸಾಧ್ಯ ಎಂದು ಚಿಂತಿಸಲಿಕ್ಕೆ ನಮ್ಮ ಮುಂದಿರುವ ರಮಝಾನ್ ತಿಂಗಳು ಸಕಾಲ.
ವಿಶ್ವದಲ್ಲಿ ನಡೆಯುತ್ತಿರುವ ಅನಾಗರಿಕ ಕೋಮು ಗಲಭೆಗಳು ಇಲ್ಲದಾಗಬಹುದು. ಹೆಣ್ಣಿನ ಮೇಲಿನ ದೌರ್ಜನ್ಯಗಳು ಅಳಿಸಿ ಹೋಗಬಹುದು. ಅತ್ಯಾಚಾರದಂತಹ ಕೆಡುಕುಗಳಿಂದ ಸಮಾಜವು ಮುಕ್ತವಾಗಬಹುದು. ಪ್ರಬಲರ ಹಾಗೂ ದುರ್ಬಲರ ನಡುವಿನ ಸಂಘರ್ಷಗಳು ನಡೆಯಲಾರದು. ಕುಟುಂಬ ಕಲಹಗಳು ಒಳಜಗಳಗಳು ಇಲ್ಲದಾಗಬಹುದು. ವರದಕ್ಷಿಣೆಯಂತಹ ಮಹಾಮಾರಿಗೆ ಅಂತ್ಯ ಹಾಡಬಹುದು. ಛಿದ್ರವಾದಂತಹ ಕುಟುಂಬಗಳನ್ನು ಒಗ್ಗೂಡಿಸಬಹುದು. ಹೆಣ್ಣು ಹುಟ್ಟಿದಲ್ಲಿ ಅದನ್ನು ಕುಟುಂಬದ ಕಣ್ಣಾಗಿ ಕಾಣುವ ವಾತಾವರಣವನ್ನು ನಿರ್ಮಿಸಬಹುದು. ಹುಟ್ಟುವ ಮಗು ಹೆಣ್ಣು ಎಂದಾಕ್ಷಣ ಅದನ್ನು ಕೊಲ್ಲುವಂತಹ ಅನಾಗರಿಕ ಪದ್ಧತಿಯು ನಿಲ್ಲಬಹುದು. ಸಂಕಷ್ಟಗಳಿಗೆ ಸಹಾಯ ಮಾಡುವಂತಹ ಉದಾತ್ತ ಗುಣವನ್ನು ಹೊಂದಬಹುದು. ದಾನ ದರ್ಮಗಳ ಮೂಲಕ ಕಿತ್ತು ತಿನ್ನುವ ಬಡತನವನ್ನು ಸಮಾಜದಿಂದ ಕೊನೆಗೊಳಿಸಬಹುದು. ಹೆಣ್ಣು ಯಾವುದೇ ಭಯವಿಲ್ಲದೇ ಸಂಚರಿಸುವಂತಹ ಉತ್ತಮ ಸಮಾಜ ನಿರ್ಮಾಣವಾಗಬಹುದು. ಇಷ್ಟೇ ಅಲ್ಲ, ಅದೆಷ್ಟೋ ಕೆಡುಕುಗಳನ್ನು ನಿರ್ಮೂಲನೆ ಮಾಡುವಂತಹ ಪ್ರೇರಣಾ ಶಕ್ತಿಯನ್ನು ಪವಿತ್ರ ರಮಝಾನ್ ತಿಂಗಳು ಹೊಂದಿದೆ. ಇಂತಹ ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡಿ ಪ್ರತಿಯೊಬ್ಬರಲ್ಲಿಯೂ ತಕ್ವಾ (ದೇವಭಯ) ವನ್ನು ಜಾಗೃತಗೊಳಿಸುವ ರಮಝಾನ್ ಮಾಸವು ಇದೋ ನಮ್ಮ ಮುಂದಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ನಿರಂತರವಾದ ತರಬೇತಿಗಳ ಮೂಲಕ ಪ್ರತಿಯೊಬ್ಬರಲ್ಲಿಯೂ ಅಲ್ಲಾಹನ ಭಯ ಜಾಗೃತಗೊಳಿಸುವಂತಹ ಸಮಾಜವನ್ನು ನಿರ್ಮಾಣ ಮಾಡುವ ಪ್ರತಿಜ್ಞೆಗೈಯ್ಯೋಣ. ಅಲ್ಲಾಹು ಆ ತೌಫೀಕ್ ನಮಗೆಲ್ಲರಿಗೂ ನೀಡಲಿ (ಆಮೀನ್)
ಲೇಖನ : ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

ರಮಝಾನ್ ಮತ್ತು ಬದಲಾವಣೆ

“ವಾಸ್ತವದಲ್ಲಿ ಅಲ್ಲಾಹನು ಸತ್ಯ ವಿಶ್ವಾಸಿಗಳಿಂದ ಅವರ ತನು, ಧನಗಳನ್ನು ಸ್ವರ್ಗದ ಬದಲಿಗೆ ಖರೀದಿಸಿದ್ದಾನೆ” (ಪವಿತ್ರ ಕುರ್ ಆನ್ 9:11)
ಯಾವುದೇ ಚಿಂತೆಯಿಲ್ಲದ, ಸದಾ ತಾರುಣ್ಯದಲ್ಲಿರುವ, ಯಾವತ್ತಿಗೂ ಮರಣವಿಲ್ಲದ ಶಾಶ್ವತವಾದ ಹಾಗೂ ಆರೋಗ್ಯದಾಯಕ  ಜೀವನ ಮನುಷ್ಯನಿಗೆ ಲಭಿಸುವುದು ಅದು ಸ್ವರ್ಗದಲ್ಲಿ ಮಾತ್ರವಾಗಿದೆ. ಪ್ರತಿಯೊಬ್ಬ ಸತ್ಯ ವಿಶ್ವಾಸಿಯೂ ತನ್ನ ಜೀವನದಲ್ಲಿ ಸ್ವರ್ಗವನ್ನು ಅಪೇಕ್ಷಿಸುವುದು ಸರ್ವೇ ಸಾಮಾನ್ಯ. ಒಬ್ಬ ಸತ್ಯ ವಿಶ್ವಾಸಿಯ ಈ ಬಯಕೆಯನ್ನು ಅಲ್ಲಾಹನಲ್ಲದೇ ಬೇರೆ ಯಾರಿಂದಲೂ ಈಡೇರಿಸಲು ಸಾಧ್ಯವಿಲ್ಲ. ಈ ಬಯಕೆಯು ಈಡೇರಬೇಕಾದರೆ ಮನುಷ್ಯನು ತನ್ನ ಜೀವನದಾದ್ಯಂತ ಸೃಷ್ಥಿಕರ್ತನ ಆಜ್ಞಾನುಸಾರ ಜೀವನ ನಡೆಸಬೇಕು. ಇದಕ್ಕಾಗಿ ಸೃಷ್ಥಿಯ ಆರಂಭದಿಂದಲೇ ಮನುಷ್ಯ ಜೀವನದ ಉದ್ದೇಶ ಅಲ್ಲಾಹನ ಆಜ್ಞಾನುಸಾರ ಜೀವನ ಎಂಬ ಕರಾರನ್ನು ಪಡೆಯಲಾಗಿದೆ. (ಅಲ್ ಅಅ್ ರಾಫ್ 172)
       ಸ್ವೇಚ್ಛಾಚಾರ ಮನುಷ್ಯನ ಅತೀ ದೊಡ್ಡ ದೌರ್ಬಲ್ಯವಾಗಿದೆ. ಯಾವಾಗ ಮನುಷ್ಯನು ಸ್ವೇಚ್ಛಾಚಾರಿಯಾಗಿ ಜೀವನ ನಡೆಸಲು ಪ್ರಾರಂಭಿಸುತ್ತಾನೋ ಅವನು ನೇರ ದಾರಿಯಿಂದ ವಿಮುಖನಾಗುವುದು ಖಂಡಿತ. ಇಂತಹ ಸಂಧರ್ಭಗಳಲ್ಲೆಲ್ಲಾ ಅಲ್ಲಾಹನು ತನ್ನ ಪ್ರವಾದಿಗಳ ಮೂಲಕ ಮನುಷ್ಯನನ್ನು ಜಾಗೃತಗೊಳಿಸಿರುವುದು ಅವನ ಅಪಾರವಾದ ಕರುಣೆಯಾಗಿದೆ.
       ಮನುಷ್ಯನ ಜ್ಞಾನವನ್ನು ಬೆಳಗಿಸಲಿಕ್ಕಾಗಿ, ಅವನ ಜೀವನ ಸುಧಾರಣೆಗಾಗಿ ರಂಝಾನ್ ತಿಂಗಳ ಉಪವಾಸ ವೃತವು ವಿಶಿಷ್ಥ ಪಾತ್ರವನ್ನು ಹೊಂದಿದೆ.  ಬೆಳಗ್ಗಿನಿಂದ ಸಂಜೆಯವರೇಗೆ ಅನ್ನಾಹಾರವನ್ನು ತ್ಯಜಿಸಿ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ನಿಯಂತ್ರಣದಲ್ಲಿ ಇಟ್ಟಲ್ಲಿ ದೇವಭಯವು ಮನಸ್ಸಿನಲ್ಲಿ ಉಂಟಾಗುವುದು ಸ್ವಾಭಾವಿಕ. ಉಪವಾಸವಲ್ಲದೇ ಬೇರೆ ಎಲ್ಲಾ ಇಬಾದತ್ ಗಳಲ್ಲಿ ತೋರಿಕೆ ಇದೆ. ಆದರೆ ಇದರಲ್ಲಿ ಕಾಪಟ್ಯತೆಗೆ ಅವಕಾಶವೇ ಇಲ್ಲ. ಆದ್ದರಿಂದ ಉಪವಾಸವನ್ನು ಗತಕಾಲದಿಂದಲೇ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೆ ಅಲ್ಲಾಹನು ಕಡ್ಡಾಯಗೊಳಿಸಿದ್ದಾನೆ. “ಗತ ಪ್ರವಾದಿಗಳ ಅನುಯಾಯಿಗಳ ಮೇಲೆ ಉಪವಾಸ ಕಡ್ಡಾಯಗೊಳಿಸಿದಂತೆಯೇ ನಿಮ್ಮ ಮೇಲೂ ಉಪವಾಸ ವೃತವನ್ನು ಕಡ್ಡಾಯಗೊಳಿಸಲಾಗಿದೆ. ನಿಮ್ಮಲ್ಲಿ ಧರ್ಮನಿಷ್ಥೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.(ಕುರ್ ಆನ್ 2:183).

ಲೇಖನ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.