ಪ್ರವಾದಿ
ಮುಹಮ್ಮದ್ (ಸ್ವ.ಸ್ವ) ರವರು ಬಂದಂತಹ ಸಮುದಾಯವು ಗತ ಪ್ರವಾದಿಗಳ ಶಿಕ್ಷಣಗಳನ್ನು ಸಂಪೂರ್ಣವಾಗಿ ವಿರೂಪಗೊಳಿಸಿದಂತಹ
ಸಮುದಾಯವಾಗಿತ್ತು. ಇಲ್ಲಿ ಮಾನವತೆಯು ಮರೀಚಿಕೆಯಾಗಿತ್ತು. ಅಲ್ಲಾಹನ ತೌಹೀದ್(ಏಕದೇವತ್ವ) ನ್ನು ವಿಕಾರಗೊಳಿಸಲಾಗಿತ್ತು.
ಜಾಗತಿಕ ಮುಸ್ಲಿಮರ ಕೇಂದ್ರ ಬಿಂದುವಾಗಿದ್ದ ಪವಿತ್ರ ಕಅಬಾ ಭವನವದ ನಗ್ನವಾಗಿ ತವಾಫ್(ಪ್ರದಕ್ಷಿಣೆ)
ಮಾಡಲಾಗುತ್ತಿತ್ತು. ಇಲ್ಲಿ ಮೂರ್ತಿಗಳನ್ನು ಪ್ರತಿಷ್ಥಾಪಿಸಿ ಅದಕ್ಕೆ ಸಾಷ್ಥಾಂಗವೆರಗುತ್ತಾ, ಅವುಗಳ
ಮುಖಾಂತರ ಸಹಾಯ ಯಾಚಿಸುವುದನ್ನೇ ನೈಜ ದಾಸ್ಯಾರಾಧನೆ ಎಂದು ಭಾವಿಸಲಾಗಿತ್ತು. ಮನುಷ್ಯ ಮನುಷ್ಯರ ನಡುವಿನ
ಸಂಭಂಧಗಳು ಹಳಸಿ ಹೋಗಿ, ಸಣ್ಣ ಪುಟ್ಟ ವಿಷಯಗಳನ್ನು ವಿಷಯಾಂತರವನ್ನಾಗಿ ಮಾಡಿ ತಲೆ ತಲಾಂತರದವರೆಗೆ
ಜಗಳಗಳನ್ನು ಹುಟ್ಟು ಹಾಕಲಾಗುತ್ತಿತ್ತು. ಮಾನವ ಸಂಭಂಧಗಳು ಕೆಟ್ಟು ನುಚ್ಚು ನೂರಾಗಿದ್ದವು. ಕುಟುಂಬದ
ಕಣ್ಣಾದ ಹೆಣ್ಣು ಅಗೌರವದ ಸಂಕೇತವಾಗಿತ್ತು. ಇದಕ್ಕೆ ಪ್ರತಿಯಾಗಿ ಅವರು ಹೆಣ್ಣು ಹುಟ್ಟಿದಾಕ್ಷಣ ಜೀವಂತ
ಸಮಾಧಿ ಮಾಡಲು ಹಿಂಜರಿಯುತ್ತಿರಲಿಲ್ಲ. ಒಟ್ಟಲ್ಲಿ ಮಾನವ ಸಂಭಂಧಗಳು ಹಳಸಿ ಹೋಗಿ ಅನಾಗರಿಕತೆಯು ತಾಂಡವಾಡುತ್ತಿತ್ತು.
ಸಂಪೂರ್ಣ ಅಲ್ಲೋಲ ಕಲ್ಲೋಲವಾದಂತಹ ಕಾರ್ಗತ್ತಲು ಆವರಿಸಿದಂತಹ ಸಮುದಾಯದಲ್ಲಿ ಪ್ರವಾದಿ ಮುಹಮ್ಮದ್
(ಸ್ವ.ಸ್ವ) ಹುಟ್ಟಿ ಬಂದರು.
ಇಂತಹ ಘನಘೋರ ಕತ್ತಲೆಯಲ್ಲಿ ಮನುಷ್ಯರನ್ನು ನೈಜತೆಯೆಡೆಗೆ
ತರುವುದೆಂದರೆ ಅದು ಕಬ್ಬಿಣದ ಕಡಲೆಯೇ ಸರಿ. ಅಲ್ಲಾಹನು ಇಡೀ ಜಗತ್ತಿನಲ್ಲಿ ಆವರಿಸಿದಂತಹ ಕತ್ತಲೆಯನ್ನು
ನಿವಾರಿಸಲಿಕ್ಕಾಗಿ ಸತ್ಯಸಂಧ, ನಿಷ್ಕಲ್ಮಷ ಹೃದಯವುಳ್ಳ, ಮಾನವ ವಿಮೋಚಕ, ಕರುಣಾಮಯಿಯಾದ ಪ್ರವಾದಿ ಮುಹಮ್ಮದ್
(ಸ್ವ.ಸ್ವ) ರನ್ನು ತನ್ನ ದಿವ್ಯ ವಚನಗಳನ್ನು ನೀಡಿ ಕಳುಹಿಸಿದ. ಹೃದಯಗಳನ್ನು ಬೆಳಗಿಸುವಂತಹ ಈ ವಚನಗಳ
ಮೂಲಕ ಪ್ರವಾದಿ (ಸ್ವ.ಸ್ವ) ರವರು ಕಲ್ಲುಮಳ್ಳುಗಳ ಹಾದಿಗಳನ್ನು ಸವೆಸಿ ಅನಾಗಕರಿಕರನ್ನು ನಾಗರಿಕತೆಯೆಡೆಗೆ
ತರುವಲ್ಲಿ ಸಂಪೂರ್ಣ ಯಶಸ್ವಿಯಾದರು. ಸತ್ಯ ಅಸತ್ಯಗಳ ನಡುವಿನ ವ್ಯತ್ಯಾಸವನ್ನೂ ಮಾನವತೆಯ ಗೌರವ ಘನತೆಗಳನ್ನೂ
ತೋರಿಸಿ ಕೊಟ್ಟರು. ಅಲ್ಲಾಹನ ಹಾಗೂ ಅವನ ದಾಸರ ನಡುವಿನ ಸಂಭಂಧಗಳನ್ನು ಪರಿಚಯಿಸಿ ಅವರ ಹೃದಯಗಳಲ್ಲಿ
ದೇವ ಭಯ ಉಂಟಾಗುವ ವಾತಾವರಣವನ್ನು ನಿರ್ಮಿಸಿದರು. ನಿರಂತರವಾದ ತರಬೇತಿಗಳ ಮೂಲಕ ವರ್ಣ ಭೇಧ, ಜಾತಿ
ಭೇಧ, ಕುಟುಂಬ ಕಲಹಗಳಂತಹ ಮಾನವ ವಿರೋಧಿ ನೀತಿಗಳಿಂದ ಹೊರತರಲು ಶ್ರಮಿಸಿದರು.
ಪವಿತ್ರ ರಮಝಾನ್ ಕುರ್ ಆನ್ ಅವತೀರ್ಣವಾದ ತಿಂಗಳಾಗಿದೆ.
ಮನುಷ್ಯರಿಗೆ ಸುವ್ಯಕ್ತವಾದ ಶಿಕ್ಷಣವನ್ನು ನೀಡಿ ಸತ್ಯ ಪಥದತ್ತ ಕೊಂಡೊಯ್ಯಲು ದಾರಿ ತೋರಿಸುವ ಗ್ರಂಥ
ಅದಾಗಿದೆ. ಆದ್ದರಿಂದ ಯಾರಾದರೂ ಈ ತಿಂಗಳನ್ನು ಹೊಂದಿದಲ್ಲಿ ಈ ತಿಂಗಳ ಸಂಪೂರ್ಣ ಉಪವಾಸವನ್ನು ಆಚರಿಸಬೇಕು
ಎಂಬ ಆಜ್ಞೆಯನ್ನು ಅಲ್ಲಾಹನು ನೀಡುತ್ತಾನೆ. (ಕುರ್ ಆನ್ 2; 185).
“ಇರುಳಿನ ಕರಿ ರೇಖೆಯಿಂದ ಉಷಾ ಕಾಲದ ಬಿಳಿರೇಖೆಯು
ನಿಮಗೆ ಬೇರ್ಪಟ್ಟು ತೋರುವ ವರೆಗಿನ ನಿಶಾವಧಿಯಲ್ಲಿ ತಿನ್ನಿರಿ, ಕುಡಿಯಿರಿ. ಅನಂತರ ಈ ಕಾರ್ಯಗಳನ್ನೆಲ್ಲಾ
(ದೈಹಿಕ ಕಾಮನೆಗಳ ಹೊರತು) ರಾತ್ರಿಯ ವರೆಗೆ ನಿಮ್ಮ ಉಪವಾಸವನ್ನು ಪೂರ್ತಿಗೊಳಿಸಿರಿ. (ಕುರ್ ಆನ್
2:187)
ಪ್ರವಾದಿ ಮುಹಮ್ಮದ್(ಸ್ವ.ಸ್ವ) ರವರ ನಿರಂತರವಾದ ತರಬೇತಿಗಳಿಂದ
ಎಚ್ಚೆತ್ತು ಸತ್ಯವಿಶ್ವಾಸಿಗಳಾದ ಅರಬರು ಅಲ್ಲಾಹನ ಆದೇಶಕ್ಕೆ ತಲೆಬಾಗಿದರು. ಒಂದು ತಿಂಗಳ ಸಂಪೂರ್ಣ
ಉಪವಾಸವು ಹಾಗೂ ದೈಹಿಕ ಬಯಕೆಗಳ ನಿಂತ್ರಣವು ಅವರಲ್ಲಿ ದೇವ ಭಯವನ್ನು ಉಂಟು ಮಾಡುವಲ್ಲಿ ಸಹಕಾರಿಯಾಯಿತು.
ನೆರೆಮನೆಯ ಒಂದು ಪ್ರಾಣಿಯು ನೀರು ಕುಡಿದ ಕಾರಣಕ್ಕಾಗಿ ತಲೆಮಾರುಗಳ ವರೆಗೆ ಜಗಳ ಮಾಡುವವರು ತನ್ನ ಸಂಪತ್ತಿನ
ಒಂದು ಪಾಲನ್ನು ನೆರೆಯವನಿಗೆ ನೀಡುವಷ್ಟು ಉದಾರಿಗಳಾದರು. ದ್ವೇಷ, ವೈರತ್ವದ ಬದಲು ಸಹನಾಶೀಲರಾಗಿ ಬಾಳುವಷ್ಟು
ಎತ್ತರಕ್ಕೇರಿದರು. ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರವರು ಹಾಕಿ ಕೊಟ್ಟ ಸನ್ಮಾರ್ಗವು ಅಂದೂ ಪ್ರಸ್ತುತ
ಇಂದೂ ಪ್ರಸ್ತುತ. ಈ ಲೋಕದ ಅಂತ್ಯದವರೆಗೂ ಪ್ರಸ್ತುತವೇ ಆಗಿದೆ.
ಪವಿತ್ರ ರಮಝಾನ್ ಮಾಸದ ಮೊದಲ ಹತ್ತು ದಿವಸ ನಮ್ಮನ್ನಗಲಿದೆ.
ಇವು ಅಲ್ಲಾಹನ ರಹ್ ಮತ್ ನ ದಿನಗಳಾಗಿದ್ದವು. ಇಂದಿನಿಂದ ಎರಡನೇ ಹತ್ತು ಪ್ರಾರಂಭ. ಇವು ಮಗ್ ಫಿರತ್
ಗಳಿಂದ ಕೂಡಿದ ಪುಣ್ಯ ದಿವಸಗಳಾಗಿವೆ. ಅಲ್ಲಾಹು ನಮ್ಮೆಲ್ಲರ ಮೊದಲ ಹತ್ತು ಉಪವಾಸಗಳನ್ನು ಸ್ವೀಕರಿಸಿ
ಮಧ್ಯದ ಹತ್ತು ದಿನಗಳಲ್ಲಿ ಚಾಚೂ ತಪ್ಪದೇ ಅವನ ಆಜ್ಞಾನುಸಾರ ಇಬಾದತ್ ಮಾಡುವ ತೌಫೀಕ್ ನಮಗೆ ನೀಡಲಿ.
ಹಾಗೂ ಅವನ ನೈಜ ದಾಸರಾಗುವ ತೌಫೀಕ್ ನಮಗೆ ಲಭಿಸಲಿ (ಆಮೀನ್).
ಲೇಖನ
: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

No comments:
Post a Comment