Monday, 29 June 2015

ರಮಝಾನ್ ಮತ್ತು ಬದಲಾವಣೆ

“ವಾಸ್ತವದಲ್ಲಿ ಅಲ್ಲಾಹನು ಸತ್ಯ ವಿಶ್ವಾಸಿಗಳಿಂದ ಅವರ ತನು, ಧನಗಳನ್ನು ಸ್ವರ್ಗದ ಬದಲಿಗೆ ಖರೀದಿಸಿದ್ದಾನೆ” (ಪವಿತ್ರ ಕುರ್ ಆನ್ 9:11)
ಯಾವುದೇ ಚಿಂತೆಯಿಲ್ಲದ, ಸದಾ ತಾರುಣ್ಯದಲ್ಲಿರುವ, ಯಾವತ್ತಿಗೂ ಮರಣವಿಲ್ಲದ ಶಾಶ್ವತವಾದ ಹಾಗೂ ಆರೋಗ್ಯದಾಯಕ  ಜೀವನ ಮನುಷ್ಯನಿಗೆ ಲಭಿಸುವುದು ಅದು ಸ್ವರ್ಗದಲ್ಲಿ ಮಾತ್ರವಾಗಿದೆ. ಪ್ರತಿಯೊಬ್ಬ ಸತ್ಯ ವಿಶ್ವಾಸಿಯೂ ತನ್ನ ಜೀವನದಲ್ಲಿ ಸ್ವರ್ಗವನ್ನು ಅಪೇಕ್ಷಿಸುವುದು ಸರ್ವೇ ಸಾಮಾನ್ಯ. ಒಬ್ಬ ಸತ್ಯ ವಿಶ್ವಾಸಿಯ ಈ ಬಯಕೆಯನ್ನು ಅಲ್ಲಾಹನಲ್ಲದೇ ಬೇರೆ ಯಾರಿಂದಲೂ ಈಡೇರಿಸಲು ಸಾಧ್ಯವಿಲ್ಲ. ಈ ಬಯಕೆಯು ಈಡೇರಬೇಕಾದರೆ ಮನುಷ್ಯನು ತನ್ನ ಜೀವನದಾದ್ಯಂತ ಸೃಷ್ಥಿಕರ್ತನ ಆಜ್ಞಾನುಸಾರ ಜೀವನ ನಡೆಸಬೇಕು. ಇದಕ್ಕಾಗಿ ಸೃಷ್ಥಿಯ ಆರಂಭದಿಂದಲೇ ಮನುಷ್ಯ ಜೀವನದ ಉದ್ದೇಶ ಅಲ್ಲಾಹನ ಆಜ್ಞಾನುಸಾರ ಜೀವನ ಎಂಬ ಕರಾರನ್ನು ಪಡೆಯಲಾಗಿದೆ. (ಅಲ್ ಅಅ್ ರಾಫ್ 172)
       ಸ್ವೇಚ್ಛಾಚಾರ ಮನುಷ್ಯನ ಅತೀ ದೊಡ್ಡ ದೌರ್ಬಲ್ಯವಾಗಿದೆ. ಯಾವಾಗ ಮನುಷ್ಯನು ಸ್ವೇಚ್ಛಾಚಾರಿಯಾಗಿ ಜೀವನ ನಡೆಸಲು ಪ್ರಾರಂಭಿಸುತ್ತಾನೋ ಅವನು ನೇರ ದಾರಿಯಿಂದ ವಿಮುಖನಾಗುವುದು ಖಂಡಿತ. ಇಂತಹ ಸಂಧರ್ಭಗಳಲ್ಲೆಲ್ಲಾ ಅಲ್ಲಾಹನು ತನ್ನ ಪ್ರವಾದಿಗಳ ಮೂಲಕ ಮನುಷ್ಯನನ್ನು ಜಾಗೃತಗೊಳಿಸಿರುವುದು ಅವನ ಅಪಾರವಾದ ಕರುಣೆಯಾಗಿದೆ.
       ಮನುಷ್ಯನ ಜ್ಞಾನವನ್ನು ಬೆಳಗಿಸಲಿಕ್ಕಾಗಿ, ಅವನ ಜೀವನ ಸುಧಾರಣೆಗಾಗಿ ರಂಝಾನ್ ತಿಂಗಳ ಉಪವಾಸ ವೃತವು ವಿಶಿಷ್ಥ ಪಾತ್ರವನ್ನು ಹೊಂದಿದೆ.  ಬೆಳಗ್ಗಿನಿಂದ ಸಂಜೆಯವರೇಗೆ ಅನ್ನಾಹಾರವನ್ನು ತ್ಯಜಿಸಿ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ನಿಯಂತ್ರಣದಲ್ಲಿ ಇಟ್ಟಲ್ಲಿ ದೇವಭಯವು ಮನಸ್ಸಿನಲ್ಲಿ ಉಂಟಾಗುವುದು ಸ್ವಾಭಾವಿಕ. ಉಪವಾಸವಲ್ಲದೇ ಬೇರೆ ಎಲ್ಲಾ ಇಬಾದತ್ ಗಳಲ್ಲಿ ತೋರಿಕೆ ಇದೆ. ಆದರೆ ಇದರಲ್ಲಿ ಕಾಪಟ್ಯತೆಗೆ ಅವಕಾಶವೇ ಇಲ್ಲ. ಆದ್ದರಿಂದ ಉಪವಾಸವನ್ನು ಗತಕಾಲದಿಂದಲೇ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೆ ಅಲ್ಲಾಹನು ಕಡ್ಡಾಯಗೊಳಿಸಿದ್ದಾನೆ. “ಗತ ಪ್ರವಾದಿಗಳ ಅನುಯಾಯಿಗಳ ಮೇಲೆ ಉಪವಾಸ ಕಡ್ಡಾಯಗೊಳಿಸಿದಂತೆಯೇ ನಿಮ್ಮ ಮೇಲೂ ಉಪವಾಸ ವೃತವನ್ನು ಕಡ್ಡಾಯಗೊಳಿಸಲಾಗಿದೆ. ನಿಮ್ಮಲ್ಲಿ ಧರ್ಮನಿಷ್ಥೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.(ಕುರ್ ಆನ್ 2:183).

ಲೇಖನ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.

No comments:

Post a Comment