Wednesday, 2 July 2014

ಉಪವಾಸ ಹಾಗೂ ಸತ್ಯ ವಿಶ್ವಾಸಿಯ ಆಹಾರ ಶೈಲಿ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಮಿಕ್ ದಾದ್ ಬಿನ್ ಮಅದಿ ಕರಬ್ ರಿಂದ ವರದಿ: ಪ್ರವಾದಿವರ್ಯರು(ಸ) ಹೇಳುವುದನ್ನು ನಾನು ಕೇಳಿದ್ದೇನೆ: ಹೊಟ್ಟೆಗಿಂತ ಕೆಟ್ಟ ಪಾತ್ರೆಯನ್ನು ಮಾನವನು ತುಂಬಿಸಿಲ್ಲ. ಮಾನವ ಪುತ್ರನಿಗೆ ಅವನ ಬೆನ್ನೆಲುಬನ್ನು ನೇರ ನಿಲ್ಲಿಸಲು ಕೆಲವು ತುತ್ತುಗಳೇ ಸಾಕು. ಅದಕ್ಕಿಂತ ಹೆಚ್ಚು ಬೇಕೇ ಬೇಕೆಂದಾದರೆ, ಹೊಟ್ಟೆಯ 3/1 ಭಾಗ ಆಹಾರಕ್ಕೆ, 3/1 ನೀರಿಗೆ ಮತ್ತು 3/1 ಉಸಿರಾಟಕ್ಕೆ ಮೀಸಲಿಡಲಿ (ತಿರ್ಮಿದಿ)
ಮಾನವ ಕುಲಕ್ಕೆ ಎಲ್ಲ ವಿಷಯಗಳಲ್ಲಿಯೂ ಮಾರ್ಗದರ್ಶನ ನೀಡುವ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯು ಇಲ್ಲಿ ಈ ಹದೀಸ್ ನಲ್ಲಿ ಆರೋಗ್ಯಪೂರ್ಣ ಆಹಾರ ಶೈಲಿಯನ್ನು ಕಲಿಸುತ್ತಿದೆ. ಒಮ್ಮೆ ಆಲೋಚಿಸಿ ನೋಡಿ, ಪ್ರವಾದಿವರ್ಯರ(ಸ್ವ.ಸ್ವ.) ಈ ಆಹಾರ ಶೈಲಿಯನ್ನೇ ಆಧುನಿಕ ವೈದ್ಯ ಶಾಸ್ತ್ರವೂ ಮಾನವನಿಗೆ ಕಲಿಸುತ್ತಿದೆ. ಹಸಿವೆಯ ರೋಗಗಳಿಗಿಂತ ಹೆಚ್ಚಾಗಿ ಅಮಿತ ಆಹಾರದ ದುರಂತಗಳನ್ನು ಅನುಭವಿಸುತ್ತಿರುವ ಆಧುನಿಕ ಮಾನವ ಸಮೂಹಕ್ಕೆ ಪ್ರವಾದಿವರ್ಯರ(ಸ್ವ.ಸ್ವ.) ಈ ಮಾರ್ಗದರ್ಶನವು ಬಹಳ ಉಪಯುಕ್ತವಾಗಿದೆ.
ಆಹಾರವು ಜೀವರಕ್ಷಣೆಯ ಅನಿವಾರ್ಯ ಘಟಕ ಮತ್ತು ಆರೋಗ್ಯ ರಕ್ಷಣೆಯಲ್ಲಿ ಅದರ ಪಾತ್ರ ಪ್ರಧಾನ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯು ಒಂದು ಶಾಸ್ತ್ರೀಯ ಆಹಾರ ಶೈಲಿಯನ್ನು ಕಲಿಸುತ್ತಿದೆ. ಮಾನವನ ಜಠರವನ್ನು ಕೆಡಿಸಿ, ದೇಹದ ಪ್ರಮುಖ ಅಂಗಾಗಳನ್ನು ಹಾನಿಗೊಳಿಸುವ ಅಮಿತ ಭೋಜನದ ಬಗ್ಗೆ ಕುರ್ ಆನ್ ಹೀಗೆ ಹೇಳಿದೆ: `ನೀವು ತಿನ್ನಿರಿ, ಕುಡಿಯಿರಿ, ಆದರೆ ಮಿತಿಮೀರಬೇಡಿರಿ. ಮಿತಿ ಮೀರುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.’ ಆಹಾರದ ನಿಯಮ-ನಿಷೇಧಗಳನ್ನು ನೋಡದೆ ಸಿಕ್ಕಾಪಟ್ಟೆ ತಿಂದು ಹೊಟ್ಟೆ ತುಂಬಿಸುವವರು ಮತ್ತು ತಮ್ಮ ಸಂಪತ್ತನ್ನು ಸಂಪೂರ್ಣವಾಗಿ ಆಹಾರಕ್ಕಾಗಿ ವ್ಯಯಿಸುವ ವಿನಾ ಜೀವನಕ್ಕೆ ಬೇರೆ ಯಾವುದೇ ಗುರಿಯಿಲ್ಲದವರನ್ನು ಕುರ್ ಆನ್ ಇಲ್ಲಿ ಎಚ್ಚರಿಕೆ ನೀಡಿದೆ. ಈ ವಚನದ ವಿವರಣೆಯಲ್ಲಿ ಇಬ್ನು ಕಸೀರ್ ಹೀಗೆ ಹೇಳಿದ್ದಾರೆ: `ಅಲ್ಲಾಹನು ವೈದ್ಯಕೀಯವನ್ನು ಸಂಪೂರ್ಣವಾಗಿ ಒಂದು ವಚನದ ತುಣುಕಿನಲ್ಲಿ ಸೇರಿಸಿದ್ದಾನೆ. ಇದು ಪವಿತ್ರ ಕುರ್ ಆನ್ ನಲ್ಲಿ ವೈದ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಮುಖ ವಚನವೂ ಆಗಿದೆ.
ಪ್ರವಾದಿವರ್ಯರು(ಸ್ವ.ಸ್ವ.) ಅತಿಭೋಜನದ ಅಪಾ ಯದ ಬಗ್ಗೆ ಹಲವು ಬಾರಿ ಸೂಚಿಸಿದ್ದಾರೆ. ಹೊಟ್ಟೆ ತುಂಬಿಸುವ ಬಗ್ಗೆ ನೀವು ಎಚ್ಚರವಹಿಸಿರಿ, ಯಾಕೆಂದರೆ ಹೊಟ್ಟೆ ತುಂಬಿಸುವಿಕೆಯು ದೇಹವನ್ನು ಕೆಡಿಸಿ ರೋಗವನ್ನು ಆಮಂತ್ರಿಸಿ, ನಮಾಝ್ನಿಂ ದ ಉದಾಸೀನಗೊಳಿಸುತ್ತದೆ. ಆದ್ದರಿಂದ ನೀವು ಮಿತ ಆಹಾರ ಸೇವಿಸುವಿರಾಗಿ.’ ಅತಿಭೋಜನವನ್ನು ತೊರೆಯುವುದರಿಂದ ನಮಗೆ ಆರೋಗ್ಯಪೂರ್ಣ ದೇಹದೊಂದಿಗೆ ದೃಢ ಮನಸ್ಸನ್ನೂ ಪಡೆಯಬಹುದೆಂದು ಈ ಪ್ರವಾದಿ ವಚನದಿಂದ ಗ್ರಹಿಸಬಹುದು. ಯಾಕೆಂದರೆ ಅಮಿತ ಆಹಾರವು ದೇಹವನ್ನು ಕೆಡಿಸುವುದರೊಂದಿಗೆ ನಮಾಝ್ನಬಲ್ಲಿ ಮನಸ್ಸಿನ ಏಕಾಗ್ರತೆಯನ್ನು ಹಾಳುಗೆಡಹುತ್ತದೆ. ಇಮಾಮ್ ಗಝ್ಝಾಲಿ ತಮ್ಮ ಇಹ್ಯಾಉಲೂಮುದ್ದೀನ್ ನಲ್ಲಿ, ಅತಿಭೋಜನದ ಕೆಡುಕುಗಳನ್ನು ಎಣಿಸಿ ಹೇಳಿದ್ದಾರೆ: `ಅತಿ ಬೋಜನವು ಬುದ್ಧಿಯ ಪ್ರಕ್ರಿಯೆಗಳನ್ನು ಕೆಡಿಸಿ, ಹೃದಯದ ಒಳದೃಷ್ಟಿ ಯನ್ನು ನಷ್ಟಗೊಳಿಸುತ್ತದೆ. ಅದರಿಂದಾಗಿ ವಿಷಯ ಗಳನ್ನು ಸುಲಭದಲ್ಲಿ ಗ್ರಹಿಸಲು ಸಾಧ್ಯವಾಗುವುದಿಲ್ಲ’ ಅರ್ಥಾತ್, ಅಮಿತ ಆಹಾರವು ನಮ್ಮ ಬುದ್ಧಿ ಮತ್ತು ಮನಸ್ಸನ್ನು ಮರಗಟ್ಟಿಸಿ ತಿಳುವಳಿಕೆಯನ್ನು ನಾಶಗೊಳಿಸಿ ನಮ್ಮನ್ನು ಸಂಪೂರ್ಣವಾಗಿ ಸೋಮಾರಿಗಳನ್ನಾಗಿ ಮಾಡುತ್ತದೆ. ಪ್ರವಾದಿವರ್ಯರು(ಸ) ಹೇಳಿದರು: `ಹಸಿವೆಯು ಜ್ಞಾನದ ಪ್ರಕಾಶವಾಗಿದೆ. ಅಮಿತ ಭೋಜನವು ಅಲ್ಲಾಹನಿಂದ ದೂರವಾಗುವ ಸಂಕೇತವಾಗಿದೆ. ಆದ್ದರಿಂದ, ಅಮಿತ ಭೋಜನದಿಂದ ನಾವು ಹೃದ ಯದಿಂದ ಜ್ಞಾನದ ಪ್ರಕಾಶವನ್ನು ನಂದಿಸಿಬಿಡುತ್ತೇವೆ. 


ಅಮಿತ ಬೋಜನವನ್ನು ಪ್ರವಾದಿವರ್ಯರು(ಸ) ಅವಿಶ್ವಾಸಿಯ ಸ್ವಭಾವವೆಂದೂ ವರ್ಣಿಸಿದ್ದಾರೆ. ಬುಖಾರಿ ಮತ್ತು ಮುಸ್ಲಿಮ್ ಉದ್ಧರಿಸಿರುವ ಒಂದು ಹದೀಸ್ ನಲ್ಲಿ ಹೀಗಿದೆ: ಸತ್ಯವಿಶ್ವಾಸಿಯು ಒಂದು ಜಠರದಿಂದ ತಿನ್ನುವಾಗ ಅವಿಶ್ವಾಸಿಯು ಏಳು ಜಠರಗಳಲ್ಲಿ ತಿನ್ನುತ್ತಾನೆ. ಇಲ್ಲಿ ಸತ್ಯವಿಶ್ವಾಸಿ ಮತ್ತು ಅವಿಶ್ವಾಸಿಯ ಆಹಾರ ಶೈಲಿಯ ವ್ಯತ್ಯಾಸವನ್ನು ಸೂಚಿಸಲಾಗಿದೆ. ಮಿತಾಹಾರ ಸೇವನೆಯು ಸತ್ಯವಿಶ್ವಾಸಿಗೆ ಕೇವಲ ಆರೋಗ್ಯದಾಯಕ ಕರ್ಮ ಮಾತ್ರವಲ್ಲ, ಅವನ ಧಾರ್ಮಿಕ ಕರ್ತವ್ಯವೂ ಆಗಿದೆ. ಒಮ್ಮೆ ಡೊಳ್ಳೊಟ್ಟೆಯ ಓರ್ವರನ್ನು ಪ್ರವಾದಿ ವರ್ಯರು(ಸ) ನೋಡಿದಾಗ ಅವರ ಹೊಟ್ಟೆಗೆ ಬೆಟ್ಟು ಮಾಡಿ,ಇದು ಇಲ್ಲದಿರುತ್ತಿದ್ದರೆ ಅದೇ ನಿನಗೆ ಹಿತಕರವಾಗುತ್ತಿತ್ತು’ ಎಂದು ಹೇಳಿದರು. (ಅಹ್ಮದ್, ಬೈಹಕಿ) ಅಮಿತ ಆಹಾರ ಸೇವನೆಯಿಂದಾಗುವ ಡೊಳ್ಳೊಟ್ಟೆಯನ್ನು ಸೂಚಿಸಿ ಪ್ರವಾದಿ(ಸ) ಆ ರೀತಿ ಹೇಳಿದ್ದರು. ಆಹಾರವು ಒಂದು ಫ್ಯಾಶನ್ ಮತ್ತು ಆಡಂಬರದ ಪ್ರತೀಕವಾಗಿರುವ ಈ ಕಾಲದಲ್ಲಿ ಇಸ್ಲಾಮ್ ಆದೇಶಿಸಿರುವ ಹೊಟ್ಟೆಯ 3/2 ಭಾಗ ವನ್ನು ಆಹಾರ ಪಾನೀಯ ಮತ್ತು ಉಳಿದ ಭಾಗ ವನ್ನು ಉಸಿರಾಟಕ್ಕೆ ಅಡ್ಡಿಯಾಗದಂತೆ ಶೂನ್ಯವಾಗಿರಿಸಲು ಮಾನವನು ಸಿದ್ಧನಾದರೆ ಆತನಿಗೆ ಆರೋಗ್ಯ ಪೂರ್ಣ ದೇಹ ಮತ್ತು ಆರೋಗ್ಯಪೂರ್ಣ ಮನಸ್ಸು ಪ್ರಾಪ್ತವಾಗುತ್ತದೆ. ಆರೋಗ್ಯಪೂರ್ಣ ದೇಹವು ಇಸ್ಲಾಮಿನ ಗುರಿಯಾಗಿದೆ. ಆದ್ದರಿಂದಲೇ ಇಸ್ಲಾಮ್ ಸುವ್ಯವಸ್ಥಿತ ಮತ್ತು ವೈಜ್ಞಾನಿಕ ಆಹಾರ ಶೈಲಿಯನ್ನು ಕಲಿಸುತ್ತಿದೆ. ನಿರಂತರವಾದ ಒಂದು ತಿಂಗಳ ಉಪವಾಸವು ಇದಕ್ಕೊಂದು ಉತ್ತಮ ನಿದರ್ಶನ.

ಉಪವಾಸ ಮತ್ತು ಅಲ್ಲಾಹನ ಜೊತೆಗಿನ ಸಂಭಂಧ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಉಪವಾಸ ಎಲ್ಲಾ ತರಹದ ಕಾಪಟ್ಯತೆಯಿಂದ ಮುಕ್ತವಾದ ಇಬಾದತ್(ಪ್ರಾರ್ಥನೆ) ಆಗಿದೆ. ನಮಾಝ್, ಹಜ್, ಝಿಕ್ರ್ ಇದು ಶಾರೀರಿಕವಾಗಿ ಮಾಡುವಂತಹ ಪ್ರಾರ್ಥನೆಗಳಾಗಿವೆ. ಝಕಾತ್ ಇದು ಸಿರಿವಂತರ ಮೂಲಕ ಬಡವರು ಪಡೆಯುವಂತಹ ಆರ್ಥಿಕ ಪ್ರಯೋಜನಗಳು. ಇದನ್ನು ನಾವು ಕಣ್ಣಾರೆ ನೋಡಬಹುದು. ಆದರೆ ಉಪವಾಸ, ಇದರಲ್ಲಿ ಒಬ್ಬ ವ್ಯಕ್ತಿಯು ಅಲ್ಲಾಹನ ಸಂಪ್ರೀತಿಗಾಗಿ ಅನ್ನಪಾನೀಯಗಳನ್ನು ತೊರೆದು ದೈಹಿಕವಾದ ಎಲ್ಲಾ ಸುಖಗಳಿಂದ ತನ್ನನ್ನು ದೂರವಿರಿಸುತ್ತಾನೆ. ನಿಜವಾಗಿಯೂ ಇದರಲ್ಲಿ ಉಪವಾಸದಿಂದಿರುವ ವ್ಯಕ್ತಿಯು ಹಸಿವಿನಿಂದ ಇದ್ದಾನೋ ಅಥವಾ ಇಲ್ಲವೋ ಎಂದು ಸ್ವಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಾಹನನ್ನು ವಿಶೇಷವಾಗಿ ಭಯಪಟ್ಟು ಅವನು ಈ ತ್ಯಾಗಕ್ಕೆ ಅಣಿಯಾಗುತ್ತಾನೆ. ಇದರಿಂದಿ ನೇರವಾಗಿ ಅವನ ಸಂಭಂಧವು ಅಲ್ಲಾಹನ ಜೊತೆಗಿರುತ್ತದೆ.
ಇದಕ್ಕಾಗಿಯೇ, ಉಪವಾಸದ ಮಹತ್ವವನ್ನು ವಿವರಿಸುತ್ತಾ ಪ್ರವಾದಿ ಮುಹಮ್ಮದ್(ಸ್ವ.ಸ್ವ)ರವರು ಹೇಳುತ್ತಾರೆ, ಅಲ್ಲಾಹನು ಹೇಳುತ್ತಾನೆ, ಉಪವಾಸದ ಹೊರತು ಎಲ್ಲಾ ಪುಣ್ಯ ಕಾರ್ಯಗಳು ಅದನ್ನು ಮಾಡುವ ವ್ಯಕ್ತಿಗಾಗಿದೆ ಆದರೆ ಉಪವಾಸ ಹಾಗಲ್ಲ, ಇದು ನನಗಾಗಿದೆ ಹಾಗೂ ಇದರ ಪ್ರತಿಫಲವನ್ನು ನಾನೇ ಸ್ವತಃ ನೀಡುತ್ತೇನೆ( ಸಹೀಹ್ ಬುಖಾರಿ:). ಉಪವಾಸವನ್ನು ಅಲ್ಲಾಹನು ತನ್ನ ಜೊತೆಗೆ ಸಂಭಂಧಿಸಿದಾಗ ಇದರಲ್ಲಿ ತೋರಿಕೆಯ ಪ್ರಶ್ನೆಯೇ ಉಧ್ಬವಿಸುವುದಿಲ್ಲ. 


ಈ ಹದೀಸ್ ನ ಪ್ರಕಾರ ಒಂದು ಮಾತಂತು ನಮಗೆ ತಿಳಿಯುತ್ತದೆ, ಎಲ್ಲಾ ಇಬಾದತ್(ಪುಣ್ಯ ಕಾರ್ಯ) ಗಳ ಪ್ರತಿಫಲವನ್ನು ಅಲ್ಲಾಹನು ಮಲಾಯಿಕ್ (ದೇವದೂತರು) ಗಳ ಮುಖಾಂತರ ನೀಡುವನು ಆದರೆ ಉಪವಾಸದ ಪ್ರತಿಫಲವನ್ನು ಅಲ್ಲಾಹನು ಸ್ವತಃ ನೀಡುವನು. ತನ್ಮೂಲಕ ಅಲ್ಲಾಹನು ಉಪವಾಸವನ್ನು ಇಡುವ ತನ್ನ ದಾಸರನ್ನು ವಿಶೇಷವಾಗಿ ಗೌರವಿಸಿದ್ದಾನೆ. ನಿಜವಾಗಿಯೂ ಇದು ಒಂದು ವ್ಯಕ್ತಿಗೆ ಸಿಗುವಂತಹ ಮಹಾನ್ ಗೌರವವಾಗಿದೆ. ಸ್ವತಃ ಅಲ್ಲಾಹನೇ ತನ್ನ ವತಿಯಿಂದ ನೀಡುವಂತಹ ಪ್ರತಿಫಲಗಳು ಯಾವ ತರಹದ್ದಾಗಿರಬಹುದು ಇದನ್ನು ಊಹಿಸಲೂ ಅಸಾಧ್ಯ.

ಉಪವಾಸದ ಅರ್ಥ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಪವಿತ್ರ ಕುರ್ ಆನಿನ ಎರಡನೇ ಅಧ್ಯಾಯದಲ್ಲಿ ಅಲ್ಲಾಹನು ರಮಝಾನ್ ತಿಂಗಳ ಉಪವಾಸದ ಮಹತ್ವವನ್ನು ವಿವರಿಸುತ್ತಾ ಹೇಳುತ್ತಾನೆ.. ನಿಮಗೆ ಈ ತಿಂಗಳು ದೊರೆತಲ್ಲಿ ಇದರ ಉಪವಾಸವನ್ನು ಖಡ್ಡಾಯವಾಗಿ ನಿರ್ವಹಿಸಿ.(ಅಲ್ ಬಕರ:185) ಉಪವಾಸಕ್ಕೆ ಅರಬಿ ಭಾಷೆಯಲ್ಲಿ ಸಿಯಾಮ್ ಎಂದು ಕರೆಯುತ್ತೇವೆ. ಈ ಶಬ್ದದ ಅರ್ಥ “ನಿಲ್ಲಿಸಿ, ಕೊನೆಗೊಳಿಸಿ, ಅಂತ್ಯಗೊಳಿಸಿ” ಎಂದಾಗಿದೆ. ಹಾಗೂ ಶರೀಅತ್ ನಲ್ಲಿ ಬೆಳಗ್ಗಿನ ಜಾವದಿಂದ ಸೂರ್ಯಾಸ್ತಮಾನದ ವರೆಗೆ ಅನ್ನ ಪಾನೀಯಗಳನ್ನು ಸೇವಿಸುವುದರಿಂದ ಹಾಗೂ ಎಲ್ಲಾ ತರಹದ ದೈಹಿಕ ಆಸೆ ಆಕಾಂಕ್ಷೆಗಳಿಂದ ತನ್ನನ್ನು ತಡೆಯುವುದು, ದೂರವಿಡುವುದು ಎಂದಾಗಿದೆ.
ಅಲ್ಲಾಹನ ವಿವೇಚನಾತ್ಮಕ ಆದೇಶ :
ಹಾಗೆ ನೋಡುವುದಾದರೆ ಉಪವಾಸ ಒಂದು ಕಠಿಣವಾದ ದೈಹಿಕ ಶ್ರಮ ಎಂದು ನಮಗೆ ಕಂಡುಬರುತ್ತದೆ. ಅಲ್ಲಾಹನು ಇದನ್ನು ಸರಳಗೊಳಿಸಲು ಅತ್ಯಂತ ವಿವೇಚನಾತ್ಮಕವಾಗಿ ತನ್ನ ದಾಸರಿಗೆ ಹೇಳುತ್ತಾನೆ, ಉಪವಾಸವನ್ನು ನಿಮಗೆ ಕಡ್ಡಾಯಗೊಳಿಸಿದ್ದು ಇದೊಂದು ಹೊಸ ಆದೇಶವಲ್ಲ ಬದಲಾಗಿ ನಿಮಗಿಂತ ಮೊದಲು ಬಂದ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೂ ಕಡ್ಡಾಯಗೊಳಿಸಲಾಗಿತ್ತು.
ಒಂದು ಕಾರ್ಯವನ್ನು ಸಾಮೂಹಿಕವಾಗಿ ನಿರ್ವಹಿಸುವಾಗ ಅದು ಎಷ್ಟೇ ಕಷ್ಟ ಎಂದು ಕಂಡು ಬಂದರೂ ಅದಕ್ಕೆ ನಾವು ಸುಲಭವಾಗಿ ಹೊಂದಿಕೊಂಡು ಹೋಗುತ್ತೇವೆ. ಇದೊಂದು ಸ್ವಾಭಾವಿಕ ವಿಷಯ. ಇದಕ್ಕಾಗಿಯೇ ಅಲ್ಲಾಹನು ಆದಿಪಿತ ಆದಮ್(ಅ.ಸ.) ರಿಂದ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ್ವ.ಸ್ವ.) ರ ವರೇಗೆ ಎಲ್ಲಾ ಪ್ರವಾದಿಗಳ ಅನುಯಾಯಿಗಳ ಮೇಲೂ ನಮಾಝ್ ಹಾಗೂ ಉಪವಾಸವನ್ನು ಕಡ್ಡಾಯಗೊಳಿಸಿದ್ದನು.
ಉಪವಾಸದ ಉದ್ದೇಶ :
ಉಪವಾಸವನ್ನು ಕಡ್ಡಾಯಗೊಳಿಸುವ ಜೊತೆಗೆ ಅಲ್ಲಾಹನು ಅತ್ಯಂತ ಸ್ಪಷ್ಟವಾಗಿ ಅದರ ಉದ್ದೇಶವನ್ನೂ ವಿವರಿಸುತ್ತಾ ಹೇಳುತ್ತಾನೆ, ಓ ಸತ್ಯ ವಿಶ್ವಾಸಿಗಳೇ, ನಿಮ್ಮ ಮೇಲೆ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ ನಿಮಗಿಂತ ಮುಂಚಿನ ಉಮ್ಮತ್ (ಅನುಯಾಯಿಗಳು) ಗಳ ಮೇಲೆ ಕಡ್ಡಾಯಗೊಳಿಸಿದ ಹಾಗೆ, ನಿಮ್ಮಲ್ಲಿ ತಕ್ವಾ(ದೇವ ಭಕ್ತಿ) ಉಂಟು ಮಾಡಲಿಕ್ಕಾಗಿ.( ಕುರ್ ಆನ್:ಅಲ್ ಬಕರ:183) ಸೂಕ್ಷವಾಗಿ ಗಮನಿಸಿದರೆ, ನಮ್ಮಲ್ಲಿ ದೇವ ಭಕ್ತಿ ಉಂಟು ಮಾಡುವಲ್ಲಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಅನ್ನ ಪಾನೀಯಗಳನ್ನು ಸೇವಿಸುವುದರಿಂದ ಹಾಗೂ ಮನುಷ್ಯನು ದೈಹಿಕ ಆಸೆ ಆಕಾಂಕ್ಷೆಗಳ ಗುಲಾಮನಾಗುವುದರಿಂದ ಖಂಡಿತವಾಗಿಯೂ ಆ ವಸ್ತುಗಳ ದಾಸನಾಗುತ್ತಾನೆ. ಇದರಿಂದ ದ್ವೇಷ, ಅಸೂಯೆ, ಕೋಪ, ದುರಹಂಕಾರ, ದೌರ್ಜನ್ಯ ಮುಂತಾದ ಹಲವು ಕೆಟ್ಟ ಗುಣಗಳು ಹುಟ್ಟಿಕೊಳ್ಳುತ್ತವೆ. ನಿರಂತರವಾದ ಒಂದು ತಿಂಗಳ ಉಪವಾಸವು ಎಲ್ಲಾ ತರಹದ ದುರ್ಗುಣಗಳಿಂದ ತನ್ನನ್ನು ಹತೋಟಿಯಲ್ಲಿಡಲು ಬಲು ಸಹಕಾರಿ. 

ಒಂದೇ ಸಮನೆ ಒಂದೇ ತರಹದ ಇಬಾದತ್ ಗಳನ್ನು ಮಾಡುವುದರಿಂದ ಧಾರ್ಮಿಕ ಚೌಕಟ್ಟಿನಲ್ಲಿದ್ದು, ತಕ್ವಾ(ದೇವಭಯ)ದ ಮೂಲಕ ಜೀವನ ನಡೆಸುವಂತಹ ಸೌಭಾಗ್ಯವನ್ನು ಅಲ್ಲಾಹನು ನೀಡುತ್ತಾನೆ. ಉಪವಾಸದ ಮೂಲಕ ಒಬ್ಬ ವ್ಯಕ್ತಿ, ಅನ್ನಪಾನೀಯಗಳನ್ನು ಸೇವಿಸುವುದು ಮುಂತಾದ ಧರ್ಮ ಸಮ್ಮತ ಕಾರ್ಯಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ತ್ಯಜಿಸುವಾಗ ಧರ್ಮಸಮ್ಮತವಲ್ಲದ ಕಾರ್ಯಗಳಿಂದ ದೂರವಿರುವುದು ಅವನಿಗೆ ಸುಲಭವಾಗುತ್ತದೆ. ಇದೇ ನೈಜ ತಕ್ವಾ(ದೇವಭಯ). ಹಾಗೂ ಇದರಿಂದ ಸ್ವೇಚ್ಚಾಚಾರದಿಂದ ದೂರವಿದ್ದು ಅಲ್ಲಾಹನ ಆಜ್ಞಾನುಸಾರ ಜೀವನ ನಡೆಸುವಂತಹ ಅಪಾರ ಶಕ್ತಿ ನಮಗೆ ಲಭಿಸುತ್ತದೆ. ಒಂದು ತಿಂಗಳ ಉಪವಾಸದಿಂದ ಒಬ್ಬ ವ್ಯಕ್ತಿಯಲ್ಲಿ ಅಲ್ಲಾಹನನ್ನು ಭಯಪಡುವಂತಹ ವಿಶೇಷ ಗುಣ ಉಂಟಾದಲ್ಲಿ ಇಹಲೋಕದಲ್ಲಿಯೂ, ಪರಲೋಕದಲ್ಲಿಯೂ ಇದರ ಉತ್ತಮ ಪ್ರತಿಫಲ ಸಿಗುವುದು ಖಂಡಿತ. ಇದುವೇ ಉಪವಾಸದ ನೈಜ ಉದ್ದೇಶ.

ರಂಝಾನ್ ತಿಂಗಳು ಹಾಗೂ ಉಪವಾಸ : (ರಂಝಾನ್ ಸ್ಪೆಷಲ್)

 : ರಂಝಾನ್ ತಿಂಗಳು ಮುಸ್ಲಿಮರಿಗಾಗಿ ಅಲ್ಲಾಹನ ವತಿಯಿಂದ ದೊರೆಯುವ ಬಹು ದೊಡ್ಡ ಭಾಗ್ಯವಾಗಿದೆ. ಹಗಲಿರುಳು ಮನ ಮಸ್ತಿಷ್ಕಗಳಿಗೆ ವಿಶೇಷ ಶಾಂತಿಯನ್ನು ನೀಡುವಂತಹ ವಾತಾವರಣ ಅಲ್ಲಿರುತ್ತದೆ. ಪುಣ್ಯಗಳನ್ನು ಗಳಿಸಿ ಅಲ್ಲಾಹನ ಸಂತೃಪ್ತಿಯನ್ನು ಗಳಿಸುವವರಿಗೆ ಇದೊಂದು ಉತ್ತಮ ಅವಕಾಶ.
ಎಲ್ಲಾ ತರಹದ ಪುಣ್ಯ ಕಾರ್ಯಗಳಿಗೆ ಈ ತಿಂಗಳಿಗೆ ನೀಡಿದಂತಹ ವಿಶೇಷ ಮಹತ್ವ ಬೇರೆ ಯಾವ ತಿಂಗಳಿಗೂ ಅಲ್ಲಾಹನು ನೀಡಲಿಲ್ಲ. ಹಾಗೂ ಈ ತಿಂಗಳಲ್ಲಿ ಪುಣ್ಯ ಕಾರ್ಯಗಳಿಗೆ ಲಭಿಸುವ ಪ್ರತಿಫಲಗಳು ಬೇರೆ ಯಾವ ತಿಂಗಳಲ್ಲೂ ಲಭ್ಯವಿಲ್ಲ. ಎಲ್ಲಾ ತರಹದ ಸದ್ಗುಣ ಹಾಗೂ ಪುಣ್ಯ ಕಾರ್ಯಗಳಿಗೆ ಹೋಲಿಸಿದರೆ ರಮಝಾನ್ ತಿಂಗಳಿಗೆ ವಿಶೇಷವಾದ ಮಹತ್ವವಿದೆ. ಈ ತಿಂಗಳ ಉಪವಾಸವನ್ನು ಎಲ್ಲಾ ಪ್ರಾಯಪೂರ್ತಿಯಾದ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಲಾಗಿದೆ. ಅಲ್ಲಾಹನು ರಮಝಾನ್ ತಿಂಗಳಲ್ಲಿ ಉಪವಾಸ,ಇಫ್ತಾರ್,ಸಹರಿ, ತರಾವೀಹ್,ತಹಜ್ಜುದ್,ಇಅತಿಕಾಫ್,ಝಿಕ್ರ್, ಸದಕ(ಬಡವರಿಗೆ ಸಹಾಯ) ಮುಂತಾದ ವಿಶೇಷ ಇಬಾದತ್(ಪ್ರಾರ್ಥನೆ) ಗಳನ್ನು ಮಾಡುವ ಆದೇಶವನ್ನು ನೀಡುವ ಮೂಲಕ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಸ್ವ)ರವರ ಅನುಯಾಯಿಗಳ ಮೇಲೆ ವಿಶೇಷವಾದ ಕರುಣೆಯನ್ನು ತೋರಿದ್ದಾನೆ. ರಮಝಾನ್ ತಿಂಗಳ ಆಗಮನಕ್ಕಿಂತ ಮುಂಚೆ ಪ್ರವಾದಿ ಮುಹಮ್ಮದ್ (ಸ್ವ.ಸ್ವ) ರವರು ಇದನ್ನು ಸ್ವಾಗತಿಸುತ್ತಿದ್ದರು. ತನ್ನ ಅನುಯಾಯಿಗಳಾದ ಸ್ವಹಾಬಿಗಳಿಗೂ ವಿಶೇಷವಾಗಿ ಇದನ್ನು ಸ್ವಾಗತಿಸಲು ಕರೆ ನೀಡುತ್ತಿದ್ದರು.
ಪ್ರವಾದಿ(ಸ್ವ.ಸ್ವ) ಒಮ್ಮೆ ಸ್ವಹಾಬಿಗಳ ಮಜ್ಲಿಸ್ ನಲ್ಲಿ ಮಾತನಾಡುತ್ತಾ ನಿಮ್ಮನ್ನು ಯಾರು ಸ್ವಾಗತಿಸುತ್ತಿದ್ದಾರೆ ಹಾಗೂ ನೀವು ಯಾರನ್ನುಸ್ವಾಗತಿಸುತ್ತಿದ್ದೀರಿ ಎಂದು ಕೇಳಿದರು. ಆಗ ಉಮರ್ (ರ.ಅ.) ರವರು, ಪ್ರವಾದಿ (ಸ್ವ.ಸ್ವ.)ರವರೇ, ಏನು ತಮ್ಮ ಮೇಲೆ ವಹೀ(ದೇವವಾಣಿ) ಅವತೀರ್ಣವಾಗುತ್ತಿದೆಯೇ ಅಥವಾ ವೈರಿಗಳ ಜೊತೆ ಯುಧ್ಧ ನಡೆಯಲಿದೆಯೋ ಎಂದು ತನ್ನ ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸಿದರು. ಆಗ ಪ್ರವಾದಿ(ಸ್ವ.ಸ್ವ.) ರವರು ಇದನ್ನು ನಿರಾಕರಿಸುತ್ತಾ ಹೇಳಿದರು, ಪವಿತ್ರ ರಮಝಾನ್ ತಿಂಗಳ ಮೊದಲನೇ ರಾತ್ರಿಯಲ್ಲಿ ಅಲ್ಲಾಹನು ಪ್ರತಿಯೊಬ್ಬ ಸತ್ಯ ವಿಶ್ವಾಸಿಯ ದೋಷಗಳನ್ನು ಕ್ಷಮಿಸುತ್ತಾನೆ. ತನ್ಮೂಲಕ ಪವಿತ್ರ ತಿಂಗಳ ಆಗಮನದ ಮುಂಚೆ ಇದನ್ನು ಸ್ವಾಗತಿಸುವುದು ಪ್ರವಾದಿ(ಸ್ವ.ಸ್ವ) ಹಾಗೂ ಸ್ವಹಾಬಿಗಳ ಸುನ್ನತ್ (ಅನುಕರಣೆ) ಯಾಗಿದೆ. 


ಈ ತಿಂಗಳನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ.1) ರಹ್ ಮತ್(ಕರುಣೆ) 2)ಮಗ್ಫಿರತ್(ಕ್ಷಮೆ) 3) ಇತ್ಕ್ ಮಿನನ್ನಾರ್(ನರಕದ ಅಗ್ನಿಯಿಂದ ರಕ್ಷಣೆ). ಸಲ್ಮಾನ್(ರ.ಅ.)ರವರಿಂದ ವರದಿಯಾಗಿದೆ. ಪ್ರವಾದಿ(ಸ್ವ.ಸ್ವ.) ರವರು ಶಅಬಾನ್ ತಿಂಗಳ ಕೊನೆಯಲ್ಲಿ ನಮ್ಮನ್ನು ಉದ್ದೇಶಿಸುತ್ತಾ ರಮಝಾನ್ ತಿಂಗಳ ಮಹತ್ವವನ್ನು ವಿವರಿಸುತ್ತಾ, ಇದರ ಮೊದಲಿನ ಭಾಗ ರಹ್ ಮತ್ ಮಧ್ಯ ಭಾಗ ಮಗ್ಫಿರತ್ ಹಾಗೂ ಕೊನೆಯ ಭಾಗ ನರಕದ ಅಗ್ನಿಯಿಂದ ರಕ್ಷಣೆ ಎಂದು ಹೇಳಿದರು.(ವರದಿ: ಸಹೀಹ್ ಇಬ್ನ್ ಖುಝೈಮಾ)

Sunday, 27 April 2014

ವರದಕ್ಷಿಣೆಯನ್ನು ತೊಲಗಿಸಿ – ಹೆಣ್ಣಿನ ಜೀವ ಉಳಿಸಿ

ವರದಕ್ಷಿಣೆಯನ್ನು ತೊಲಗಿಸಿ – ಹೆಣ್ಣಿನ ಜೀವ ಉಳಿಸಿ

ಹೆಣ್ಣು ಒಂದು ಕುಟುಂಬದ ಕಣ್ಣು ಎನ್ನುತ್ತಾ , ಹೆಣ್ಣಿಗೆ ವಿಶೇಷ ಸ್ಥಾನಮಾನವನ್ನು ನೀಡುವ ನಾವು ಅವಳ ಮೇಲೆ ಆಗುವಂತಹ ದೌರ್ಜನ್ಯಗಳನ್ನು ಕಣ್ಣಾರೆ ಕಂಡೂ ಸಹಿಸಿಕೊಂಡಿರುವುದು ತುಂಬಾ ವಿಷಾದನೀಯ. ವರದಕ್ಷಿಣೆ ಎಂಬ ಪಿಡುಗು ಮಹಾಮಾರಿಯಾಗಿ ಜೀವನ ಪರ್ಯಂತ ಅವಳನ್ನು ಆವರಿಸಿಕೊಂಡಿದೆ. ಇದೇ ಹೆಸರಿನಲ್ಲಿ ಅದೆಷ್ಟೋ ಹೆಣ್ಣುಮಕ್ಕಳನ್ನು ಸುಟ್ಟು ಕೊಲ್ಲಲಾಯಿತು. ಆತ್ಮಹತ್ಯೆಗೆ ಪ್ರೇರೇಪಿಸಲಾಯಿತು. ಒಟ್ಟಲ್ಲಿ ನಿರಪರಾಧಿ ಹೆಣ್ಣು, ವರದಕ್ಷಿಣೆಯ ಹೆಸರಲ್ಲಿ ಹತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಲೇ ಬರುತ್ತಿದ್ದಾಳೆ.
ವರದಕ್ಷಿಣೆ ನಿರ್ಮೂಲನೆಗಾಗಿ ಸರಕಾರವು ಹಲವು ಕಾನೂನುಗಳನ್ನು ರೂಪಿಸಿದೆ. ಕಾಲಕ್ಕೆ ಅನುಗುಣವಾಗಿ ಇದರಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ. ಆದರೂ ಈ ವ್ಯವಹಾರ ತನ್ನ ಅಂತ್ಯಕ್ಕೆ ಇನ್ನೂ ತಲುಪಲಿಲ್ಲ ಹಾಗೂ ಇದರ ಮೂಲಕ ನಡೆಯುವಂತಹ ದೌರ್ಜನ್ಯಗಳೂ ಕಡಿಮೆಯಾಗಲಿಲ್ಲ. ಈಗಂತೂ ಹೆಣ್ಣುಮಗಳು ತನ್ನ ಮದುವೆಯ ಉಡುಪನ್ನು ಧರಿಸುವಾಗಲೇ ಒಂದು ದಿನ ಇದೇ ಉಡುಪು ನನ್ನ ಕಫನ್ (ಹೆಣಕ್ಕೆ ಹೊದಿಸುವು ಹೊದಿಕೆ)ಆಗಲಿಕ್ಕೂ ಸಾಧ್ಯವಿದೆ ಎಂಬ ಭಾವನೆಯೊಂದಿಗೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಗಂಡನ ಮನೆ ಕಡೆಗೆ ಹೋಗುವ ಸಮಯ ಬಂದಿದೆ. ನಿರ್ದೋಷಿಯಾದ ಈ ಹೆಣ್ಣು ಹತ್ತು ಹಲವು ಕನಸುಗಳನ್ನು ಹೊತ್ತು ತನ್ನ ಗಂಡನ ಮನೆ ತಲುಪುತ್ತಾಳೆ. ಆಗ ಅವಳ ಕನಸಲ್ಲೂ ಎಣಿಸದ ಒಂದು ದೊಡ್ಡ ಆಘಾತ ಅವಳನ್ನು ಕಾಡಿರುತ್ತದೆ. ಜೀವನ ಪರ್ಯಂತ ಅತ್ತೆಮನೆಯವರ ಕಿರುಕುಳ ಹಾಗೂ ಅಪಹಾಸ್ಯಗಳನ್ನು ಅವಳು ಸಹಿಸಬೇಕು. ರಾತ್ರಿ ಹಗಲು ಅವಳನ್ನು ಉದ್ದೇಶಪೂರ್ವಕವಾಗಿ ಸತಾಯಿಸಿ, ಅವಳ ಮೇಲೆ ಸೀಮೆ ಎಣ್ಣೆಯನ್ನು ಸುರಿಸಿ ಒಂದು ದಿನ ದುರಂತ ಅಂತ್ಯವನ್ನು ಕಾಣುವ ಹಾಗೆ ಸತಾಯಿಸಲಾಗುತ್ತದೆ. ತನ್ಮೂಲಕ ವರದಕ್ಷಿಣೆಯ ಚಿತೆಯ ಮೇಲೆ ಅವಳು ಒಂದು ದಿನ ಸುಡಲ್ಪಡುತ್ತಾಳೆ.
ವರದಕ್ಷಿಣೆ ಎಂಬ ಪೆಡಂಭೂತದ ಬೆಂಕಿ ದಿನನಿತ್ಯ ಧಗಧಗಿಸುತ್ತಲೇ ಇದೆ. ಇಂತಹ ಹತ್ತಾರು ದುರ್ಘಟನೆಗಳನ್ನು ನಾವು ದಿನಂಪ್ರತಿ ಕೇಳುತ್ತಿರುತ್ತೇವೆ. ಅದೆಷ್ಟೋ ಕುಟುಂಬಗಳು ಇಂತಹ ಜ್ವಲಂತ ಸಮಸ್ಯೆಗಳಿಂದ ಜರ್ಜರಿತರಾಗಿರುವ ವಾರ್ತೆಗಳು ನಮ್ಮ ಮುಂದಿವೆ. ಅದಾಗಲೇ ಚಿತ್ರದುರ್ಗದಲ್ಲಿ ದಿನಾಂಕ 23/4/2014 ರ ಬುಧವಾರ ನಡೆದಂತಹ ಘಟನೆಯನ್ನು ಓದಿ ಮೈಯೆಲ್ಲಾ ರೋಮಾಂಚನಗೊಂಡಿತು. ಸಿಡಿಲಿನಂತೆ ಬಂದೆರಗಿದ ಆ ಸುದ್ದಿ ಕ್ಷಣ ಹೊತ್ತು ಕಣ್ಣುಗಳನ್ನು ತೇವಗೊಳಿಸಿತು. ಅದೇ ತಾಲೂಕಿನ ಅಜ್ಜಪ್ಪನಹಳ್ಳಿ ಗ್ರಾಮದ ನಿವಾಸಿ ಸೈಯದ್ ಹುಸೇನ್ ರವರು ತನ್ನ ಮಗಳಾದ ಶಂಷಾದ್ ಳನ್ನು ಅದೇ ಗ್ರಾಮದ ನಿವಾಸಿ ಇಮಾಂ ಎಂಬ ವ್ಯಕ್ತಿಗೆ ಸರಿ ಸುಮಾರು 5 ವರ್ಷಗಳ ಹಿಂದೆ ಸಾಲ ಸೋಲ ಮಾಡಿ ವರದಕ್ಷಿಣೆ ಹಣ ಮತ್ತು ಬಂಗಾರದ ಒಡವೆಗಳನ್ನು ಕೊಟ್ಟುಮದುವೆಮಾಡಿರುತ್ತಾರೆ. ಇಷ್ಟಕ್ಕೂ ಸಾಲದೆ ಇನ್ನಷ್ಟು ವರದಕ್ಷಿಣೆಯನ್ನು ತರಲಿಕ್ಕಾಗಿ ದಿನನಿತ್ಯ ಸತಾಯಿಸುವುದು ಮಾಮೂಲಾಗಿತ್ತು. ಈ ನತದೃಷ್ಟೆ ತನ್ನ ತಂದೆಯ ಸಾಲದ ಭಾರವನ್ನು ನೋಡಿ ತಾನು ಎದುರಿಸುತ್ತಿರುವ ಮಾನಸಿಕ ಹಾಗೂ ದೈಹಿಕ ಸಂಕಷ್ಟಗಳನ್ನು ಒಳಗೊಳಗೇ ಸಹಿಸುಕೊಳ್ಳುತ್ತಿದ್ದಳು. ತಂದೆ ತಾಯಿ, ಮಗಳು ಬಹುಶಃ ಸುಖದಿಂದಿರಬೇಕು ಎಂದು ಭಾವಿಸುತ್ತಿದ್ದರು. ಕೋಮಲ ಹೃದಯದ ಈ ಹೆಣ್ಣು ಮನದೊಳಗೇ ಸಂಕಷ್ಟಗಳನ್ನು ಸಹಿಸುತ್ತಾ, ಹಸನ್ಮುಖದ ಮೂಲಕ ತನ್ನ ತಂದೆ ತಾಯಿಯನ್ನು ಸಂತೈಸಲು ಪ್ರಯತ್ನಿಸುತ್ತಿದ್ದಳು. ದಿನನಿತ್ಯದ ಕಿರುಕುಳಗಳು ಒಂದು ದಿನ ತನ್ನ ಜೀವನಕ್ಕೇ ಅಂತ್ಯವನ್ನು ಹಾಡಬಹುದು ಎಂದು ಭಾವಿಸುತ್ತಲೇ ಇದ್ದಳು ಶಂಶಾದ್. ಕೊನೆಗೆ, ಜೀವನದಲ್ಲಿ ಯಾರಿಗೂ ಬರಬಾರದಂತಹ ಆ ಕಹಿದಿನ ಬಂದೇ ಬಿಟ್ಟಿತು. ಅವಳ ಗಂಡ ಇಮಾಂ, ಮಾವ ಫಕೀರ್ ಸಾಬ್ ಮತ್ತು ಅತ್ತೆ ಹುಸೇನ್ ಬೀ ಎಂಬವರು ಸೇರಿಕೊಂಡು ತವರು ಮನೆಯಿಂದ ವರದಕ್ಷಿಣೆ ಹಣ ತರಲಿಲ್ಲ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇದಕ್ಕೂ ಸಮಾಧಾನಪಡದೇ ಒಂದು ಹೆಜ್ಜೆ ಮುಂದೆ ಹೋಗಿ ಕೊಲೆ ಮಾಡುವ ಉದ್ದೇಶದಿಂದ ಆ ನತದೃಷ್ಟೆ, ನಿರಪರಾಧಿ ಹೆಣ್ಣಿನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತಾರೆ. ಮೈಯೆಲ್ಲಾ ಸುಟ್ಟ ಗಂಭೀರ ಗಾಯಗಳಿಂದ ಪರದಾಡುತ್ತಿದ್ದ ಶಂಷಾದ್ ಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಸಿಜೆ ಆಸ್ಪತ್ರೆಗೆ ದಾಖಲು ಮಾಡಿದ್ದು, ಪಾಪ ಆ ಹೆಣ್ಣು ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಈ ಬಗ್ಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಕೇಸು ಕೂಡ ದಾಖಲಾಗಿರುತ್ತದೆ. ನಿಜವಾಗಿಯೂ ಮಾನವ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು.
ಆಹಾ, ಇದೆಂತಹ ರಾಕ್ಷಸೀಯ ಪೃವೃತ್ತಿ. ಮಾನವತೆ ಎಲ್ಲಿ ಹೋಯಿತು. ಹಾಗಾದರೆ ಹೆಣ್ಣಿಗೆ ಹೆಣ್ಣೇ ಶತ್ರುವಾ? ಅನ್ನ ಪಾನೀಯಗಳನ್ನು ನೀಡದೆ, ದೈಹಿಕವಾಗಿ ಸತಾಯಿಸಿ, ಅವಾಚ್ಯ ಶಬ್ದಗಳಿಂದ ಬೈದು ಕಣ್ಣೆದುರೇ ಸೀಮೆ ಎಣ್ಣೆ ಸುರಿಸಿ ಧಗಧಗಿಸುವಂತಹ ಆ ಬೆಂಕಿಯನ್ನು ಹೆಣ್ಣಿನ ಮೈಮೇಲೆ ನೋಡಿದರೂ ಸಮಾಧಾನವಾಗದಂತಹ ಮನೋಭಾವ. ಮಾನವನು ಯಾಕೆ ಇಷ್ಟು ಕ್ರೂರಿಯಾಗುತ್ತಿದ್ದಾನೆ. ಇಂತಹ ಅಮಾನವೀಯ ಕೃತ್ಯಗಳಿಗೆ ಅವನನ್ನು ಪ್ರೇರಿಪಿಸುವಂತಹ ವಸ್ತುವಾದರೂ ಏನು? ಸಮಾಜದಲ್ಲಿ ಹೆಣ್ಣೇ ಯಾಕೆ ಈ ರೀತಿ ದೌರ್ಜನ್ಯಕ್ಕೀಡಾಗುತ್ತಿದ್ದಾಳೆ? ಮುಗ್ಧ ಹೆಣ್ಣಿನ ಜೀವನದೊಂದಿಗೆ ನಾವ್ಯಾಕೆ ಚೆಲ್ಲಾಟವಾಡುತ್ತಿದ್ದೇವೆ? ಸಮಾಜದಲ್ಲಿ ಅವಳಿಗೇ ಆದಂತಹ ಸ್ಥಾನಮಾನಗಳಿಲ್ಲವೇ? ಮದುವೆಯಾಗುವವರೆಗೆ ಹೊರಗಿನ ಲೋಕದ ಬಗ್ಗೆ ಏನನ್ನೂ ಅರಿಯದ ಈ ಮುಗ್ದ ಹೆಣ್ಣು ಯಾಕೆ ಈ ರೀತಿ ಮರ್ದನಕ್ಕೀಡಾಗುತ್ತಿದ್ದಾಳೆ. ಇಂತಹ ಹತ್ತು ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವಿಸುತ್ತಲೇ ಇರುತ್ತವೆ.
ಇಂದು ನಾವೆಷ್ಟು ಕ್ರೂರಿಗಳಾಗಿದ್ದೇವೆಂದರೆ, ದುರ್ಘಟನೆಗಳು ಸಂಭವಿಸುವಾಗ ಎಚ್ಚೆತ್ತುಕೊಳ್ಳುತ್ತೇವೆ. ಅದರ ಬಗ್ಗೆ ಎರಡು ಲೇಖನಗಳನ್ನೋ , ಅಥವಾ ಪ್ರತಿಭಟನೆಯನ್ನೋ ಮಾಡಿ ತಮ್ಮ ಖಂಡನೆಯನ್ನು ವ್ಯಕ್ತಪಡಿಸುತ್ತೇವೆ. ಆದರೆ ಕಾಲಕ್ರಮೇಣ ಅದು ನಮ್ಮ ನೆನಪುಗಳಿಂದ ಮಾಯವಾಗುತ್ತಾ ಹೋಗುತ್ತವೆ. ಪುನಃ ನಾವು ಎಚ್ಚೆತ್ತುಕೊಳ್ಳುವುದು ಇಂತಹ ದುರ್ಘಟನೆಗಳು ಪುನರಾವರ್ತನೆಯಾದಾಗ.
ಹಾಗಂತೂ ವರದಕ್ಷಿಣೆ ಕೊಡುವ, ಹಾಗೂ ಪಡೆಯುವ ಅನಾಚಾರ ಶತಮಾನಗಳಿಂದ ನಡೆಯುತ್ತಾ ಬಂದಿದೆ. ಆದರೆ ಕಳೆದ 30 ವರ್ಷಗಳಿಂದ ಈ ರಿವಾಜು ಇನ್ನಷ್ಟು ಜಾಸ್ತಿಯಾಗಿದೆ. ಇದರ ಮೂಲಭೂತ ಕಾರಣ ಸಮುದಾಯದಲ್ಲಿ ಹೆಚ್ಚುತ್ತಿರುವ ದುರಾಸೆ ಹಾಗೂ ಅತೀ ಶೀಘ್ರ ಶ್ರೀಮಂತನಾಗುವ ಕನಸು. ಸಂಪತ್ತನ್ನು ಶೇಖರಿಸುವ ಒಂದು ಹುಚ್ಚು ನಮ್ಮಲ್ಲಿ ಅತೀ ಶೀಘ್ರವಾಗಿ ಬೆಳೆಯುತ್ತಿದೆ. ಅದು ಕಾನೂನು ಮೂಲಕವಾಗಲಿ ಅಥವಾ ಕಾನೂನುಬಾಹಿರವಾಗಲಿ ಅದರ ಪರಿವೆಯೇ ಇಲ್ಲ. ದುಡ್ಡನ್ನು ಸಂಪಾದಿಸಲಿಕ್ಕಾಗಿ ಏನು ಮಾಡಲಿಕ್ಕೂ ಹಿಂಜರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಸೆ, ಆಕಾಂಕ್ಷೆಗಳು ಹೆಚ್ಚುತ್ತಾ ಮಾರಣಾಂತಿಕ ಕಾಯಿಲೆಯ ರೂಪವನ್ನು ಪಡೆದುಕೊಂಡಿದೆ. ಬಹುದೊಡ್ಡ ಸಮುದಾಯವೇ ಇದಕ್ಕೆ ಬಲಿಯಾಗಿದೆ. ವರದಕ್ಷಿಣೆಯ ಹೆಸರಲ್ಲಿ ಬೇರೆ ಬೇರೆ ಬೇಡಿಕೆಗಳನ್ನು ಮಾಡುವುದು ಅದು ಸಿಗದೇ ಹೋದಲ್ಲಿ ಆಮಾಯಕ ಹೆಣ್ಣನ್ನು ಬಲಿತೆಗೆದುಕೊಳ್ಳುವುದು ಮಾಮೂಲಾಗಿ ಹೋಗಿದೆ. ಇದನ್ನು ಕಾನೂನಿನ ಮೂಲಕವಾಗಲೀ ಇನ್ನಾವುದೇ ಒತ್ತಡದಿಂದಾಗಲೀ ತಡೆಗಟ್ಟಲು ಸಾಧ್ಯವಿಲ್ಲ. ಮನುಷ್ಯನ ದುರಾಸೆಗಳ ಕತ್ತಲೆ ಅವನ ಕಣ್ಣುಗಳನ್ನು ಮುಚ್ಚಿಸಿದೆ. ಅವನ ಮನಸ್ಸುಗಳು ಸೃಷ್ಟಿಕರ್ತನ ಭಯ ಹಾಗೂ ಪರಲೋಕದ ಚಿಂತೆಯಿಂದ ಖಾಲಿಯಾಗಿವೆ.
ಮೊದಮೊದಲು ವರದಕ್ಷಿಣೆ ಒಂದು ರೂಢಿ ಆಗಿತ್ತು. ಆದರೆ ಈಗ ಬದಲಾವಣೆಯಾಗಿ ಅದನ್ನು ಹೆಣ್ಣಿನ ಮನೆಯವರ ಮೇಲೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ, ಬಲವಂತ ಹೇರಲಾಗುತ್ತಿದೆ. ತನ್ನ ಅಂತಸ್ತಿಗೂ ಮೇಲ್ಪಟ್ಟು ವರದಕ್ಷಿಣೆಯನ್ನು ನೀಡಿ, ಇಲ್ಲವೋ ತನ್ನ ಮಗಳ ಅಂತ್ಯವನ್ನು ಕಾಣಿರಿ .ಗಂಡನ ಮನೆಯವರ ಬೇಡಿಕೆಗಳನ್ನು ಪೂರ್ತಿಗೊಳಿಸಿ ಅಥವಾ ತನ್ನ ಮಗಳ ಸಾವಿನ ಸುದ್ದಿಯನ್ನು ಕೇಳಿ. ಎಂದು ಒತ್ತಡವನ್ನು ಹಾಕಲಾಗುತ್ತಿದೆ.
ವರದಕ್ಷಿಣೆಯ ನಿರ್ಮೂಲನೆಗಾಗಿ ಪ್ರತೀ ಹೆಣ್ಣಿನ ತಂದೆಯಾದವನು ಯಾವ ಕಾರಣಕ್ಕೂ ನಾನು ಹೆಣ್ಣಿಗೆ ಮದುವೆ ಮಾಡುವಾಗ ವರದಕ್ಷಿಣೆಯನ್ನು ನೀಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು. ಹೀಗೆಯೇ ಗಂಡು ಮಕ್ಕಳನ್ನು ಹೊಂದಿರುವ ಪೋಷಕರು ಯಾವ ಕಾರಣಕ್ಕೂ ವರದಕ್ಷಿಣೆ ರಹಿತವಾಗಿಯೇ ತನ್ನ ಮಕ್ಕಳ ಮದುವೆ ಮಾಡುತ್ತೇವೆ ಎಂದು ಧೃಡವಾದ ತೀರ್ಮಾನ ಕೈಗೊಳ್ಳಬೇಕು.ವರದಕ್ಷಿಣೆ ಕೇಳುವವರಿಗೆ ತಕ್ಕ ಉತ್ತರ ನೀಡುವ ಧೈರ್ಯ್ಯ ತೋರಬೇಕು. ಒಂದು ಹೆಣ್ಣಿಗೆ ತನ್ನ ಜೀವನದ ಸಂಗಾತಿಯಾಗಲು ಗಂಡಿನ ಹೇಗೆ ಅಗತ್ಯವಿದೆಯೋ ಹಾಗೆಯೇ ಗಂಡಿಗೆ ತನ್ನ ಮನೆಯನ್ನು ಸ್ವರ್ಗದ ಬಾಗಿಲನ್ನಾಗಿ ಮಾಡಲು ಹೆಣ್ಣಿನ ಅಗತ್ಯವಿದೆ. ಮನೆಯ ಒಳಗಿನ ಹಾಗೂ ಹೊರಗಿನ ವಿಷಯಗಳಲ್ಲಿ ಪರಸ್ಪರರು ಅವಲಂಬಿತರಾಗಿರುವಾಗ ಹೆಣ್ಣಿನ ತಂದೆಯ ಮೇಲೆ ಯಾಕೆ ಇದೊಂದು ವರದಕ್ಷಿಣೆಯ ಭಾರ?
ಬಹುತೇಕರು ತನ್ನ ಕುಟುಂಬದಲ್ಲಿಯೇ ಹೆಣ್ಣನ್ನು ನೀಡಲು ಹಿಂಜರಿಯುತ್ತಾರೆ. ಹುಡುಗಿ ಸಚ್ಚಾರಿತ್ರ್ಯವಂತಳಾದಳೂ ಸಂಪತ್ತು, ಕುರ್ಚಿ ಅಂತಸ್ತು ಇವೆಲ್ಲಾ ಅವರಿಗೆ ತುಂಬಾ ಪ್ರತಿಷ್ಠೆಯ ವಿಷಯವಾಗಿರುತ್ತದೆ. ಇಂತಹ ಸಾಮಾಜಿಕ ಮೇಲು ಕೀಳುಗಳೂ ಸಂಭಂದಗಳನ್ನು ಕೆಡಿಸುವಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದೆ. ಒಟ್ಟಲ್ಲಿ ವರದಕ್ಷಿಣೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕಿದ್ದಲ್ಲಿ ಹೆಣ್ಣು ಹೆತ್ತವರು ಕಟ್ಟುನಿಟ್ಟಿನ ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಧಾರ್ಮಿಕ ಗುರುಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ವರದಕ್ಷಿಣೆ ರಹಿತ ಮದುವೆ ಮಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ.
ಅತೀ ಕಡಿಮೆ ಸಾಕ್ಷರತೆಯನ್ನು ಹೊಂದಿದಂತಹ ರಾಜ್ಯ ಬಿಹಾರ. ಬಿಹಾರದ ನಳಂದ ಜಿಲ್ಲೆ ನಮಗೆಲ್ಲರಿಗೂ ಮಾದರಿಯಾಗಬೇಕು. ಇತ್ತೀಚೆಗೆ ಮೌಲಾನಾ ಮನ್ಸೂರ್ ಆಲಮ್ ರವರ ನೇತೃತ್ವದಲ್ಲಿ ಆ ಜಿಲ್ಲೆಯ ಎಲ್ಲಾ ಮಸೀದಿಯ ಇಮಾಮರು ಸೇರಿ ಯಾವುದೇ ಕಾರಣಕ್ಕೂ ವರದಕ್ಷಿಣೆ ಪಡೆಯುವವರ ಹಾಗೂ ಕೊಡುವವರ ನಿಖಾವನ್ನು ಮಾಡುವುದಿಲ್ಲ ಎಂದು ತೀರ್ಮಾನ ಕೈಗೊಂಡಿರುವುದು ತುಂಬಾ ಪ್ರಶಂಸನೀಯ.
ಲೇಖಕರು: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ (ಕುವೈಟ್)
ಇದು ವರದಕ್ಷಿಣೆ ಪಡೆಯುವವರ ಬೆವರೂರಿಸಿದೆ. ಈ ಸಂಕಲ್ಪ ನಮಗೆಲ್ಲರಿಗೂ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಉಲಮಾ ಉಮರಾಗಳು ಸೇರಿ ಧೃಢ ತೀರ್ಮಾನ ಕೈಗೊಂಡಲ್ಲಿ ನಮ್ಮಲ್ಲೂ ಅಂತಹ ವಾತಾವರಣವನ್ನು ನಿರ್ಮಿಸಬಹುದು. ಈ ಮೂಲಕ ನಿಸ್ವಾರ್ಥ ಮನಸ್ಸಿನಿಂದ “ವರದಕ್ಷಿಣಾ ನಿರ್ಮೂಲನೆ” ಎಂಬ ಹೋರಾಟದ ಒಂದು ಕಿಚ್ಚನ್ನು ಮನಸ್ಸಿನಲ್ಲಿ ಇಟ್ಟುಕೊಂಡಲ್ಲಿ ಸಮಾಜದಲ್ಲಿ ಒಂದು ಬಹುದೊಡ್ಡ ಪರಿಣಾಮವನ್ನು ತರಬಹುದು. ಅದು ಬರಹಗಳ ಮೂಲಕವಾಗಲಿ, ಉಪದೇಶಗಳ ಮೂಲಕವಾಗಲೀ, ಅಥವಾ ನಿಖಾಃವನ್ನು ತಡೆಯುವಂತಹ ಕ್ರಮಗಳಿಂದಾಗಲೀ. ತನ್ಮೂಲಕ ಶಂಷಾದ್ ಳಂತಹ ನತದೃಷ್ಟೆ ಹೆಣ್ಣುಗಳ ದುಃಖತಪ್ತ ಮನಸ್ಸುಗಳಿಗೆ ಸಾಂತ್ವನವನ್ನು ಒದಗಿಸಿದಂತಾಗಬಹುದು. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬಂತೆ ಪ್ರತಿಜ್ಞೆ ಗೈದಲ್ಲಿ ತಮ್ಮ ಸಾಧನೆಯಲ್ಲಿ ಸಫಲರಾಗುವುದು ಖಂಡಿತ.

Tuesday, 22 April 2014

ವರದಕ್ಷಿಣೆ ಪಡೆಯುವವರ ನಿಖಾಃವನ್ನು ತಡೆಯುವ ನಿರ್ಧಾರ

ವರದಕ್ಷಿಣೆ ಪಡೆಯುವವರ ನಿಖಾಃವನ್ನು ತಡೆಯುವ ನಿರ್ಧಾರ

ಬಿಹಾರದ,ನಳಂದ ಜಿಲ್ಲೆಯ ಮಸೀದಿಯ ಇಮಾಮರು (ಧಾರ್ಮಿಕ ಗುರುಗಳು) ವರದಕ್ಷಿಣೆಯ ಬಗ್ಗೆ ತೆಗೆದುಕೊಂಡ ನಿರ್ಧಾರ, ಮುಸ್ಲಿಂ ವಲಯದಲ್ಲಿ ಭಾರೀ ಜನಪ್ರೀಯತೆಯನ್ನು ಗಳಿಸಿಕೊಂಡಿದೆ. ಹಾಗೂ ಮುಸ್ಲಿಂ ಭಾಂಧವರು ತಮ್ಮ ಎಲ್ಲಾ ಸಲಹೆ ಸಹಕಾರಗಳನ್ನು ನೀಡುವ ಭರವಸೆಯನ್ನೂ ನೀಡಿದ್ದಾರೆ.
ಈ ಬಗ್ಗೆ ಕಳೆದ ವಾರ ನಳಂದಜಿಲ್ಲೆಯ ಕಾಝಿಯವರು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂಧರ್ಭದಲ್ಲಿ ಜಿಲ್ಲೆಯ ಎಲ್ಲಾ ಮಸೀದಿಗಳ ಇಮಾಮರು, ವರದಕ್ಷಿಣೆ ಕೊಡುವವರು ಹಾಗೂ ಪಡಕೊಳ್ಳುವವರ ಮದುವೆ ಸಮಾರಂಭದಲ್ಲಿ ನಿಖಾವನ್ನು ಮಾಡದಿರಲು ನಿರ್ಧರಿಸಿರುತ್ತಾರೆ. ದಿನಂಪ್ರತಿ ಹೆಚ್ಚುತ್ತಿರುವ ವರದಕ್ಷಿಣೆ ಸಮಸ್ಯೆಗಳಿಂದಾಗಿ ಉಂಟಾಗುವ ಪರಿಣಾಮಗಳ ಬಗ್ಗೆ ತೀವ್ರ ನೊಂದು ವಾರದ ಹಿಂದೆ ನಡೆದ ಸಮಾರಂಭದಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಈ ತೀರ್ಪಿನ ವರದಿಯನ್ನು ನಳಂದ ಜಿಲ್ಲೆಯ ಕಾಝಿಯವರಾದ ಮೌಲಾನಾ ಮನ್ಸೂರ್ ಆಲಮ್ ರವರು ಎಲ್ಲರ ಮುಂದೆ ಪ್ರಕಟಿಸಿದರು. ನಿಜವಾಗಿಯೂ, ವರದಕ್ಷಿಣೆ ಪಡೆಯುವವರ ವಿರುಧ್ಧ ತೆಗೆದುಕೊಂಡಂತಹ ಈ ನಿಲುವು ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಈ ಮಹತ್ವದ ಹೆಜ್ಜೆ ವರದಕ್ಷಿಣೆಗಾಗಿ ಹಾತೊರೆಯುವವರಲ್ಲಿ ಸಂಚಲನ ಮೂಡಿಸಿದೆ. ಅವರು ಈಗ ಅಧೀರರಾಗಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ವರದಕ್ಷಿಣೆ ಪಡೆಯುವವರ ವಿರುಧ್ದ ಇದೊಂದು ಸಾಮಾಜಿಕ ಬಹಿಷ್ಕಾರವೂ ಆಗಿದೆ. ಈ ನಿರ್ಧಾರದಲ್ಲಿ ನಾವು ನಳಂದ ಜಿಲ್ಲೆಯಲ್ಲಿ ಸಫಲರಾದಲ್ಲಿ ಬಿಹಾರದ ಇನ್ನುಳಿದ ಜಿಲ್ಲೆಗಳಲ್ಲಿಯೂ ಇದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಮೌಲಾನಾ ಮನ್ಸೂರ್ ಆಲಮ್ ರವರು ಹೇಳಿದರು. ಇದಕ್ಕಾಗಿ ಇನ್ನುಳಿದ ಎಲ್ಲಾ ಜಿಲ್ಲೆಗಳ ಮಸೀದಿಗಳ ಇಮಾಮರುಗಳನ್ನು ಒಟ್ಟುಗೂಡಿಸಿ ತಾವೂ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಿದ್ದೇವೆ ಎಂದಿದ್ದಾರೆ. ಮುಸ್ಲಿಂ ವಲಯದಲ್ಲಿ ಈ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸಲಾಗಿದೆ.
ಪಟ್ನಾ ಜಿಲ್ಲೆಯ ಮುಸ್ಲಿಂ ಸಂಘಟನೆಯ ಅಧ್ಯಕ್ಷರೂ ಆದಂತಹ ಗುಲಾಮ್ ರಸೂಲ್ ರವರು, ವರದಕ್ಷಿಣೆ ಪಡೆಯುವವರನ್ನು ಎಚ್ಚರಿಸಲಿಕ್ಕಾಗಿ ಹಾಗೂ ಈ ಬಗ್ಗೆ ಮುಸ್ಲಿಮರಲ್ಲಿ ಜಾಗ್ರತಿಯನ್ನು ಉಂಟುಮಾಡಲಿಕ್ಕಾಗಿ ತೆಗೆದುಕೊಂಡಂತಹ ಮಹತ್ವದ ಸಕಾರಾತ್ಮಕ ತೀರ್ಪಾಗಿದೆ ಇದು. ನಾನು ಎಲ್ಲಾ ತರಹದ ಸಂಪೂರ್ಣ ಸಲಹೆ ಸಹಕಾರಗಳನ್ನು ತಮಗೆ ನೀಡುತ್ತೇನೆ ಎಂದು ಹೇಳಿರುವುದು ತುಂಬಾ ಸಂತೋಷದ ವಿಷಯ.
ಪವಿತ್ರ ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಎಂಬ ಕಲ್ಪನೆಯೇ ಇಲ್ಲ. ಆದರೂ ಇನ್ನೂ ಹಲವು ಕಡೆ ಮುಸ್ಲಿಮರ ನಡುವೆ ಈ ಅನಿಷ್ಟ ಪದ್ದತಿ ಜೀವಂತವಿರುವುದು ಬಹುದೊಡ್ಡ ದೌರ್ಭಾಗ್ಯಪೂರ್ಣ ವಿಷಯ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಉಲಮಾ ಉಮರಾಗಳು ಒಟ್ಟು ಸೇರಿ ಇಂತಹದೇ ತೀರ್ಮಾನವನ್ನು ತೆಗೆದುಕೊಂಡಿದ್ದರೆ ಖಂಡಿತವಾಗಿಯೂ ಅದು ಸಮಾಜದಲ್ಲಿ ಬಹುದೊಡ್ಡ ಪರಿಣಾಮವನ್ನು ಬೀರಬಹುದು.

ರಾಜಕೀಯ-ದುರದೃಷ್ಟಕರ

ರಾಜಕೀಯ – ದುರದೃಷ್ಠಕರ

(ವಿಶ್ವಕನ್ನಡಿಗ ನ್ಯೂಸ್): ನಿಜ ಹೇಳಬೇಕಾದರೆ ಈಗ ಸ್ವಾರ್ಥ ಎಂಬ ಮಹಾ ಪಿಡುಗು ಇಡೀ ದೇಶವನ್ನೇ ನುಂಗಿ ಹೋಗಿದೆ. ನಿಸ್ವಾರ್ಥ ಎಂಬ ಪದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಚುನಾವಣೆ ಹತ್ತಿರ ಬಂದಂತೆ ಎಲ್ಲಾ ರಾಜಕಾರಣಿಗಳೂ ಮೈ ಕೊಡವಿಕೊಂಡು ತನ್ನ ಪಾಲಿನ ಅಮೃತ ಎಲ್ಲಾದರೂ ಕೈ ತಪ್ಪಿ ಹೋಗುತ್ತದೋ ಎಂಬ ಭಯದಿಂದ ಹೆಚ್ಚು ಕಡಿಮೆ ನಿರಾಹಾರ ಉಪವಾಸವನ್ನೋ ಹಿಡಿದಂತಾಗಿ ಭಾಸವಾಗುತ್ತಿದೆ. ನಿರೀಕ್ಷೆಗೆ ತಕ್ಕಂತೆ ಪ್ರತಿಫಲ ಸಿಗಲಿಲ್ಲವೋ, ಪಕ್ಷ ತನಗೆ ನೀಡಿದದಂತಹ ಹಲವು ವರ್ಷಗಳ ಸಿಹಿಯನ್ನು ಮರೆತು ಬೇರೊಂದು ಪಕ್ಷಕ್ಕೆ ಹಾರಲು ಸಿಧ್ಧತೆ ಮಾಡಿಕೊಂಡಿರುತ್ತಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಇಂತಹದೊಂದು ಬೆಳವಣಿಗೆ ತುಂಬಾ ನಾಚಿಕೆಗೇಡಿನ ಸಂಗತಿ. ಮುತ್ಸದ್ದಿ ಹಾಗೂ ಹಿರಿಯ ರಾಜಕಾರಣಿಯಾದಂತಹ ಜಾಫರ್ ಶರೀಫ್ ಇದಕ್ಕೊಂದು ನಿದರ್ಶನ.

- ಮೌಲಾನಾ ಅಬ್ದುಲ್ ಹಫೀಝ್, ಕುವೈಟ್.
ಈಗೀಗ ರಾಜಕಾರಣಿಗಳಿಗೆ ತಾವು ಕಟ್ಟಿಟ್ಟ ಬುತ್ತಿ ಎಲ್ಲಾಎದರೋ ಕೈ ತಪ್ಪಿ ಹೋಗುತ್ತದೋ ಎಂಬ ಭಯ. ತನ್ಮೂಲಕ ಜೀವನದ ಇಳಿ ವಯಸ್ಸಿನಲ್ಲಿದ್ದರೂ ತನ್ನ ಮಕ್ಕಳ, ಮರಿಮಕ್ಕಳ ಕೈಪಾಲಾಗಲಿ ಎಂದು ಟಕೇಟಿಗಾಗಿ ಹೈಕಮಾಂಡ್ ನ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಒಂದು ಜಾಯಮಾನವಾಗಿಯೇ ಹೋಗಿದೆ. ಪಕ್ಷ ನಿಷ್ಠೆ ಎಂಬುದು ಮರೀಚಿಕೆಯಾಗಿದೆ. ಇದೇ ತರಾತುರಿಯಲ್ಲಿ ದಲಿತರ ,ಮರ್ದಿತರ ಪ್ರತಿಧ್ವನಿಯಾದಂತಹ ಪಾಸ್ವಾನ್ ನಂತಹವರು ಗೆಲ್ಲುವ ಕುದುರೆಯ ಬಾಲವನ್ನು ಹಿಡಿಯಲು ಹೋಗಿ ಜಾತ್ಯಾತೀತತೆ, ಕೋಮುವಾದ ಎಂಬುವುದು ಕೇವಲ ಚುನಾವಣಾ ತಂತ್ರ ಎಂಬ ಹೇಳಿಕೆಯನ್ನು ನೀಡಿರುವುದು ತುಂಬಾ ದುರದೃಷ್ಟಕರ ಸಂಗತಿ. ಇಂತಹ ಸಂಧಿಗ್ಧ ಪರಿಸ್ಥಿತಯಲ್ಲಿ ಜನಸಾಮಾನ್ಯನು ಕಂಗಾಲಾಗಿದ್ದಾನೆ. ಅವನ ಮುಂದೆ ಯಾವ ಆಯ್ಕೆಯೂ ಇಲ್ಲದಂತಾಗಿದೆ. ಒಟ್ಟಾರೆಯಾಗಿ ಸಂವಿಧಾನ ಬಧ್ಧ ಹಕ್ಕು ಎಂಬ ಭಾವನೆಯೊಂದಿಗೆ ಮತದಾನದಂದು ಯಾವುದಾದರೊಂದು ಗುಂಡಿಗೆ ಒತ್ತಿ ಬರುವುದೇ ವಿನಃ ಯಾರ ಮೇಲೂ ಪ್ರೀತಿ, ವಿಶ್ವಾಸದಿಂದಲ್ಲ.

ಚುನಾವಣೆ ಗಿಮಿಕ್

ಚುನಾವಣೆ ಗಿಮಿಕ್

(ವಿಶ್ವ ಕನ್ನಡಿಗ ನ್ಯೂಸ್)ಈಗಾಗಲೇ ಚುನಾವಣೆಯ ಕಾವು ರಂಗೇರುತ್ತಿದೆ. ರಾಜಕಾರಣಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಇನ್ನಿಲ್ಲದಂತೆ ಮತದಾರರನ್ನು ಸೆಳೆಯಲಿಕ್ಕಾಗಿ ಪ್ರತಿಯೊಬ್ಬರೂ ತನ್ನ ತನ್ನ ಕಸರತ್ತನ್ನು ಮಾಡುತ್ತಿರುವುದನ್ನು ನಿತ್ಯ ಗಮನಿಸುತ್ತಿದ್ದೇವೆ. ವಿಶೆಷತಃ ಮುಸ್ಲಿಮರ ಓಲೈಕೆಗಂತೂ ಕೊನೆಯೇ ಇಲ್ಲದಂತಾಗಿದೆ. ಜಾತ್ಯಾತೀತ ಎಂಬ ಪದ ಅದೆಂದೋ ಮಾಸಿ ಹೋಗಿತ್ತು.
ಈಗ ಅದಕ್ಕೆ ನೀರೆರಚಿ ಪುನರುಜ್ಜೀವಗೊಳಿಸಲಾಗುತ್ತಿದೆ. ಮುಸ್ಲಿಮರ ಬಗ್ಗೆ, ಅವರ ಮೇಲೆ ಆಗುವಂತಹ ದಮನಕಾರಿ ಶೋಷಣೆಯ ಬಗ್ಗೆ ಇನ್ನಿಲ್ಲದಂತೆ ಭಾಷಣ ಬಿಗಿಯಲಾಗುತ್ತಿದೆ.ಗುಜರಾತ್ ನಲ್ಲಿ ಅದಾಗಲೇ ಪಾಪದ ಕೊಡ ತುಂಬಿ ತುಳುಕುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಯೋರ್ವರು ನನಗೆ ನೋವಿದೆ ಎಂದು ಹೇಳಿದಾಕ್ಷಣ ಎಲ್ಲವನ್ನೂ ಮರೆತು ಬಿಡಲಿಕ್ಕೆ ಸಾಧ್ಯವಿದೆಯಾ?
ಇದೊಂದು ಚುನಾವಣೆ ಗಿಮಿಕ್ ಅಷ್ಡೇ. ಚುನಾವಣೆ ಆಗಿ ಕುರ್ಚಿ ಗಟ್ಟಿ ಆಗುವುದೇ ತಡ. ನಾನು ಅಂತಹ ಮಾತು ಹೇಳಲೇ ಇಲ್ಲ, ಇದು ಮಾಧ್ಯಮಗಳ ಸೃಷ್ಟಿ ಎಂದು ಹೇಳಲು ಇವರು ಹಿಂಜರಿಯುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾರು ನಿಷ್ಠಾವಂತರು ಯಾರು ಕಲುಷಿತರು ಎಂದು ಕಂಡುಹಿಡಿಯುವುದೇ ಯಕ್ಷ ಪ್ರಶ್ನೆ..?